ಟೆಹ್ರಾನ್ : ಹಾರ್ಮುಜ್ ಜಲಸಂಧಿಯಲ್ಲಿ ಭಾರತೀಯ ಧ್ವಜ ಹೊತ್ತ ಎರಡು ಹಡಗುಗಳ ಮೇಲೆ ಇಸ್ಲಾಮಿಕ್ ರೆವುಲ್ಯೂಷನ್ ಗಾರ್ಡ್ ಕಾರ್ಪ್ಸ್ ಗನ್ ಬೋಟುಗಳು ಗುಂಡಿನ ದಾಳಿ ನಡೆಸಿದೆ ಎಂದು ವರದಿಯಾಗಿದೆ.
ಈ ದಾಳಿಯಿಂದ ಯಾರೂ ಗಾಯಗೊಂಡಿಲ್ಲ ಹಾಗೂ ಹಡಗುಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ವರದಿಗಳು ಸೂಚಿಸುತ್ತವೆ. ಘಟನೆಯ ನಂತರ ಎರಡೂ ಹಡಗು ಜಗ್ ಅರ್ನವ್ ಮತ್ತು ಸನ್ಮಾರ್ ಹೆರಾಲ್ಡ್ ,ಯೂ- ಟರ್ನ್ ಹೊಡೆದು ವಾಪಸ್ ಹಿಂತಿರುಗಬೇಕಾಯಿತು.
ಘಟನೆಯ ನಂತರ, ಭಾರತವು ಇರಾನಿನ ರಾಯಭಾರಿ ಡಾ. ಮೊಹಮ್ಮದ್ ಫಥಾಲಿ ಅವರನ್ನು ಕರೆಸಿ ಸಮನ್ಸ್ ನೀಡಿದೆ. ಇರಾನ್ ಈ ಹಿಂದೆ ಭಾರತಕ್ಕೆ ಹಡಗುಗಳ ಸುರಕ್ಷಿತ ಸಾಗಣೆಗೆ ಅನುಕೂಲ ಮಾಡಿಕೊಟ್ಟಿತ್ತು ಎಂಬುದನ್ನು ಅದು ನೆನಪಿಸಿತು. ಭಾರತದ ಕಳವಳಗಳನ್ನು ಇರಾನಿನ ಅಧಿಕಾರಿಗಳಿಗೆ ತಿಳಿಸಲು ಮತ್ತು ಜಲಸಂಧಿಯ ಮೂಲಕ ಭಾರತಕ್ಕೆ ಹಡಗುಗಳ ಸಂಚಾರಕ್ಕೆ ಅನುಕೂಲವಾಗುವಂತೆ ಕ್ರಮಗಳನ್ನು ತಕ್ಷಣ ಪುನರಾರಂಭಿಸಲು ರಾಯಭಾರಿಯನ್ನು ಕೇಳಲಾಯಿತು ಎಂದು ವಿದೇಶಾಂಗ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

