ಉಳ್ಳಾಲ : ಸೋಮೇಶ್ವರ ಪುರಸಭೆ ವ್ಯಾಪ್ತಿಯ ಕುಂಪಲ ಗುರುನಗರದಲ್ಲಿ ನಿರ್ಮಾಣ ಹಂತದ ಲೇ ಔಟ್ ಒಂದರ ಆವರಣ ಗೋಡೆ ದಿಢೀರ್ ಕುಸಿದು ಬಿದ್ದ ಪರಿಣಾಮ ಲೇ ಔಟಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜೆಸಿಬಿ ರಸ್ತೆಗೆ ಉರುಳಿ ಬಿದ್ದು ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಕಾರು, ಆಟೋ ಹಾಗೂ ಬೈಕ್ ಜಖಂಗೊಂಡಿದೆ.
ಶನಿವಾರ ಸಂಜೆ ಕುಂಪಲ ಗುರುನಗರದ ಶ್ರೀ ಕ್ರಷ್ಣ ಮುಖ್ಯಪ್ರಾಣ ದೇವಸ್ಥಾನದ ಬಳಿ ದೇವೇಶ ಸರಳಾಯ ಎಂಬವರು ನಿರ್ಮಿಸುತ್ತಿರುವ ವಸತಿ ಸಮುಚ್ಚಯದ ಬ್ರಹತ್ ಆವರಣ ಗೋಡೆ ಕಳಪೆ ಕಾಮಗಾರಿಯಿಂದ ಏಕಾಏಕಿ ಕುಸಿದ ಪರಿಣಾಮ ಬಡಾವಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಜೆಸಿಬಿ ಯಂತ್ರವು ರಸ್ತೆಗೆ ಉರುಳಿ ಬಿದ್ದಿದೆ ಜೆಸಿಪಿ ಚಾಲಕ ಕೂಡಲೇ ಹಾರಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ದಿಢೀರ್ ಕುಸಿತದಿಂದಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಸುಶೀತ್ ರಾವ್ ಅವರ ಕಾರು ಮತ್ತು ರಿಕ್ಷಾ ಹಾಗೂ ರಕ್ಷಿತ್ ಎಂಬವರ ಬೈಕ್ ಜಖಂಗೊಂಡಿದೆ.ಅಲ್ಲದೆ ಬಡಾವಣೆ ಹಲವು ಮನೆಗಳ ಆವರಣ ಗೋಡೆ ಹಾಗೂ ಮನೆಗಳಿಗೆ ಹಾನಿಯಾಗಿದೆ.
ಅಲ್ಲದೆ ಈ ರಸ್ತೆ ಪಕ್ಕ ಬಡಾವಣೆಯ ಮಕ್ಕಳು ಶಾಲೆಗೆ ರಜಾದಿನ ಆದ್ದರಿಂದ ದಿನಾಲೂ ರಸ್ತೆ ಪಕ್ಕದಲ್ಲೇ ಆಟವಾಡುತ್ತಿದ್ದು ವಿಪರೀತ ಸೆಕೆಯ ಕಾರಣ ಮಕ್ಕಳು ಹೊರಬಂದಿರಲಿಲ್ಲ ,ಈ ಕಾರಣದಿಂದಾಗಿ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಕಳಪೆ ಕಾಮಗಾರಿಯಿಂದಾಗಿ ಘಟನೆಗೆ ಕಾರಣರಾದವರನ್ನು ಕೂಡಲೇ ಬಂಧಿಸಬೇಕಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಸೋಮೇಶ್ವರ ಪುರಸಭಾ ಉಪಾಧ್ಯಕ್ಷರಾದ ರವಿಶಂಕರ್, ಸದಸ್ಯರಾದ ಮೋಹನ್ ಶೆಟ್ಟಿ ಕುಂಪಲ, ಜಯ ಪೂಜಾರಿ ,ಮನೋಜ್ ಕಟ್ಟಿಮನೆ ಹಾಗೂ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

