ಮಂಗಳೂರು : ಭಾರತದ ಸನಾತನ ಹಿಂದೂ ಸಂಪ್ರದಾಯದಲ್ಲಿ ಅಕ್ಷಯ ತೃತೀಯ ಅತ್ಯಂತ ಶುಭಕರ ದಿನಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗುತ್ತದೆ. ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಲ್ಲಿ ಆಚರಿಸಲ್ಪಡುವ ಈ ದಿನದಲ್ಲಿ ಮಾಡಿದ ಸತ್ಕಾರ್ಯಗಳು ಎಂದಿಗೂ ಕ್ಷಯವಾಗುವುದಿಲ್ಲ ಎಂಬ ನಂಬಿಕೆ ಭಕ್ತರಲ್ಲಿ ಇದೆ.
ಈ ಹಿನ್ನೆಲೆ ದಾನ, ಪೂಜೆ, ಜಪ, ಹೋಮ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಭಕ್ತರು ಆಚರಿಸುತ್ತಾರೆ. ಜೊತೆಗೆ ಹೊಸ ವ್ಯವಹಾರ ಆರಂಭ, ಮನೆ ನಿರ್ಮಾಣದ ಶುಭಾರಂಭಕ್ಕೂ ಈ ದಿನವನ್ನು ಆಯ್ಕೆ ಮಾಡುವುದು ಸಾಮಾನ್ಯವಾಗಿದೆ.
ಪುರಾಣಗಳ ಪ್ರಕಾರ, ಈ ದಿನ ಅನೇಕ ಪೌರಾಣಿಕ ಘಟನೆಗಳೊಂದಿಗೆ ಸಂಬಂಧಿಸಿದೆ. ಪರಶುರಾಮ ಜಯಂತಿ ಇದೇ ದಿನ ಆಚರಿಸಲಾಗುತ್ತದೆ. ಶ್ರೀ ಮಹಾವಿಷ್ಣು ಅವರ ಆರನೆಯ ಅವತಾರವಾದ ಪರಶುರಾಮರು ಈ ದಿನ ಜನಿಸಿದರೆಂದು ನಂಬಲಾಗಿದೆ. ಗಂಗಾ ನದಿ ಭೂಮಿಗೆ ಇಳಿದ ದಿನವೆಂದು ಪುರಾಣಗಳಲ್ಲಿ ಉಲ್ಲೇಖವಿದ್ದು, ಮಹಾಭಾರತದಲ್ಲಿ ಪಾಂಡವರಿಗೆ “ಅಕ್ಷಯ ಪಾತ್ರೆ” ದೊರೆತ ದಿನವೂ ಇದೇ ಎಂದು ಹೇಳಲಾಗುತ್ತದೆ. ಮಹರ್ಷಿ ವ್ಯಾಸರು ಇದೇ ದಿನ ಮಹಾಭಾರತ ರಚನೆ ಆರಂಭಿಸಿದರೆಂದು ನಂಬಿಕೆ ಇದೆ.

ಇದರೊಂದಿಗೆ ಶ್ರೀ ಕೃಷ್ಣ ಮತ್ತು ಸುದಾಮನ ಭೇಟಿ, ಕುಬೇರ ದೇವರಿಗೆ ಧನಾಧಿಕಾರ ದೊರೆತದ್ದು, ಜೈನ ಧರ್ಮದ ಪ್ರಕಾರ ಋಷಭನಾಥರಿಗೆ ಮೊದಲ ಆಹಾರ ದೊರೆತ ದಿನವೂ ಇದೇ ಆಗಿದೆ ಎಂಬ ನಂಬಿಕೆ ಇದೆ.
ಇದರ ಜೊತೆಗೆ ಚಿನ್ನ ಖರೀದಿ, ದಾನಧರ್ಮ ಮತ್ತು ಹೊಸ ಕಾರ್ಯಾರಂಭಗಳನ್ನು ಈ ದಿನದಲ್ಲಿ ಮಾಡುವುದರಿಂದ ಶಾಶ್ವತ ಶುಭಫಲ ಸಿಗುತ್ತದೆ ಎಂಬ ವಿಶ್ವಾಸ ಜನರಲ್ಲಿ ಗಟ್ಟಿಯಾಗಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಚರಣೆಯಲ್ಲಿ ತೊಡಗುತ್ತಾರೆ.
ಅಕ್ಷಯ ತೃತೀಯ ಆಚರಣೆಯ ಹಿನ್ನಲೆಯಲ್ಲಿ ಮಂಗಳೂರು ನಗರದ ಪಿವಿಎಸ್ ಕಲಾಕುಂಜದಲ್ಲಿರುವ ಇಸ್ಕಾನ್ ಮಂದಿರದಲ್ಲಿ ಅಕ್ಷಯ ತೃತೀಯ ಮಹೋತ್ಸವವನ್ನು ಭಕ್ತಿಭಾವದಿಂದ ಆಚರಿಸಲಾಯಿತು. ಈ ಅಂಗವಾಗಿ ಶ್ರೀ ಶ್ರೀ ಕೃಷ್ಣ ಬಲರಾಮ, ಶ್ರೀ ಶ್ರೀ ಗೌರ ನಿತಾಯಿ ಹಾಗೂ ಶ್ರೀಲ ಪ್ರಭುಪಾದ ಮೂರ್ತಿಗಳಿಗೆ ವಿಶೇಷ ಶೃಂಗಾರ ಆರತಿ ನೆರವೇರಿಸಲಾಯಿತು.
ಬಳಿಕ ಹರಿನಾಮ ಸಂಕೀರ್ತನೆ ನಡೆಯಿತು.ಅಕ್ಷಯ ತೃತೀಯದ ಮಹತ್ವ ಕುರಿತು ಭಕ್ತರಿಗೆ ವಿಶೇಷ ಆಧ್ಯಾತ್ಮಿಕ ತರಗತಿಗಳನ್ನೂ ಆಯೋಜಿಸಲಾಯಿತು.

