ಬೆಂಗಳೂರು : ಬೆಂಗಳೂರಿನ ಅಶೋಕ ನಗರದಲ್ಲಿರುವ ವಿಧಾನಸಭಾ ಶಾಸಕ ಹ್ಯಾರಿಸ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ನಡೆಸಿದ್ದಾರೆ
ಇಂದು ಬೆಳಿಗ್ಯೆ 6:30ಕ್ಕೆ 4 ಕಾರುಗಳಲ್ಲಿ ಬಂದ ಇಡಿ ಅಧಿಕಾರಿಗಳು ಅಶೋಕ ನಗರದಲ್ಲಿರುವ ಶಾಂತಿನಗರ ಶಾಸಕ ಎನ್ಎ. ಹ್ಯಾರಿಸ್ ಅವರ ಮನೆ ಜೊತೆಗೆ ಹ್ಯಾರಿಸ್ ಅವರ ಫುತ್ರರಾದ ಮೊಹಮ್ಮದ್ ನಲಪಾಡ್ ಹಾಗೂ ಓಮರ್ ಫಾರೂಕ್ ನಲಪಾಡ್ ಅವರ ಮನೆಯ ಮೇಲೂ ದಾಳಿ ನಡೆಸಿದ್ದಾರೆ. ಬೆಂಗಳೂರು ಸೇರಿದಂತೆ ಒಟ್ಟು 17 ಕಡೆಗಳಲ್ಲಿ ಮನೆಗಳ ಜೊತೆಗೆ ಸಂಬಂಧಪಟ್ಟ ಕಚೇರಿಗಳಲ್ಲೂ ED ಅಧಿಕಾರಿಗಳು ದಾಳಿ ನಡೆಸಿ ಬಿಗಿ ಬಂದೋಬಸ್ತ್ನಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ.
ಈ ದಾಳಿ ಬಿಟ್ಕಾಯಿನ್ ಹಗರಣಕ್ಕೆ ಸಂಬಂಧಿಸಿದ್ದು ಎಂದು ಹೇಳಲಾಗುತ್ತಿದೆ. ಬಿಟ್ಕಾಯಿನ್ ಹಗರಣದಲ್ಲಿ ಶ್ರೀಕಿ ಅವರನ್ನು ಬಂಧಿಸಲಾಗಿತ್ತು. ಆ ಹಗರಣದಲ್ಲಿ ಅನೇಕ ರಾಜಕೀಯ ನಾಯಕರ ಹೆಸರುಗಳು ತಳಕು ಹಾಕಿಕೊಂಡಿದ್ದವು. ಶ್ರೀಕಿ ಅವರು ತನಿಖೆಯ ವೇಳೆ ಕೆಲವು ರಾಜಕೀಯ ನಾಯಕರ ಹೆಸರನ್ನು ಪ್ರಸ್ತಾಪಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ED ಅಧಿಕಾರಿಗಳು ಈ ದಾಳಿಯನ್ನು ನಡೆಸುತ್ತಿರುವ ಸಾಧ್ಯತೆ ಇದೆ.
ಶಾಸಕ ಹ್ಯಾರಿಸ್ ಅವರ ಮನೆಯಲ್ಲಿ ED ಅಧಿಕಾರಿಗಳು ಇನ್ನೂ ಪರಿಶೀಲನೆ ನಡೆಸುತ್ತಿದ್ದಾರೆ. ದಾಳಿಯಲ್ಲಿ ಏನೆಲ್ಲಾ ದಾಖಲೆಗಳು ಪತ್ತೆಯಾಗುತ್ತವೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಈ ಘಟನೆ ಕರ್ನಾಟಕ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

