ಚಂಡೀಗಢ : ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಮದ್ಯದ ಅಮಲಿನಲ್ಲಿ ಸದನದಲ್ಲಿ ನಡೆದ ವಿಶೇಷ ಕಾರ್ಮಿಕ ದಿನದ ಅಧಿವೇಶನದಲ್ಲಿ ಭಾಗವಹಿಸಿದ್ದರು ಎಂದು ವಿರೋಧ ಪಕ್ಷದ ಶಾಸಕರು ಹೇಳಿಕೊಂಡ ನಂತರ ಪಂಜಾಬ್ ವಿಧಾನಸಭೆಯಲ್ಲಿ ಗದ್ದಲ ಉಂಟಾಯಿತು. ಮಾನ್ ಅವರಿಗೆ ಮದ್ಯ ಪರೀಕ್ಷೆ ನಡೆಸಬೇಕೆಂಬ ವಿರೋಧ ಪಕ್ಷದ ಬೇಡಿಕೆಯನ್ನು ಸ್ಪೀಕರ್ ತಿರಸ್ಕರಿಸಿದ್ದರಿಂದ ಕಾಂಗ್ರೆಸ್ ಸದನದಿಂದ ಹೊರನಡೆದರು.
ಪಂಜಾಬ್ ರಾಜಕೀಯದಲ್ಲಿ “ಮದ್ಯ” ಪ್ರಕರಣ ಮತ್ತೊಮ್ಮೆ ಭಾರಿ ಸಂಚಲನ ಸೃಷ್ಟಿಸಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಮದ್ಯಪಾನ ಮಾಡಿ ವಿಧಾನಸಭೆಗೆ ಬಂದಿದ್ದಾರೆ ಎಂದು ವಿರೋಧ ಪಕ್ಷಗಳು ತೀವ್ರ ಆರೋಪ ಮಾಡಿವೆ. ಈ ಹಿನ್ನೆಲೆಯಲ್ಲಿ ಸಿಎಂ ಸೇರಿದಂತೆ ಎಲ್ಲಾ ಶಾಸಕರಿಗೆ ತಕ್ಷಣ ಡೋಪಿಂಗ್ ಟೆಸ್ಟ್ ಮಾಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ.
ಕಾರ್ಮಿಕ ದಿನಾಚರಣೆಯ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಅಧಿವೇಶನದಲ್ಲಿ ಈ ಘಟನೆ ನಡೆದಿದೆ. ಕಾಂಗ್ರೆಸ್ ಶಾಸಕರೊಬ್ಬರು ಸಿಎಂ ಮದ್ಯದ ಅಮಲಿನಲ್ಲಿದ್ದಾರೆ ಎಂದು ಆರೋಪಿಸಿದರು. ಇದನ್ನೇ ಪ್ರಬಲ ಅಸ್ತ್ರವಾಗಿ ಬಳಸಿಕೊಂಡ ಪ್ರತಿಪಕ್ಷ ನಾಯಕ ಪ್ರತಾಪ್ ಸಿಂಗ್ ಬಾಜ್ವಾ, “ರಾಜ್ಯದ ಮುಖ್ಯಸ್ಥರ ಮೇಲೆಯೇ ಇಂತಹ ಗಂಭೀರ ಆರೋಪ ಕೇಳಿಬಂದಿರುವಾಗ, ಸತ್ಯ ತಿಳಿಯಲು ಮುಖ್ಯಮಂತ್ರಿ ಸೇರಿ ಎಲ್ಲಾ ಶಾಸಕರ ಮದ್ಯಪಾನ ಪರೀಕ್ಷೆ ನಡೆಸಬೆಕು ಅಲ್ಕೋ-ಮೀಟರ್ ಮತ್ತು ಡೋಪ್ ಟೆಸ್ಟ್ ಕಡ್ಡಾಯ ಮಾಡಿ” ಎಂದು ಪಟ್ಟು ಹಿಡಿದರು.
ಇತ್ತೀಚೆಗೆ ಆಮ್ ಆದ್ಮಿ ಪಾರ್ಟಿ (ಎಎಪಿ) ತೊರೆದು ಬಿಜೆಪಿಗೆ ಸೇರ್ಪಡೆಯಾಗಿರುವ ರಾಜ್ಯಸಭಾ ಸಂಸದೆ ಸ್ವಾತಿ ಮಾಲಿವಾಲ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡು ಭಗವಂತ್ ಮಾನ್ ಮೇಲೆ ಆರೋಪ ಮಾಡಿದ್ದಾರೆ.
“ಇಂದು ಮತ್ತೆ ಪಂಜಾಬ್ ಸಿಎಂ ಭಗವಂತ್ ಮಾನ್ ಅವರು ಪ್ರಜಾಪ್ರಭುತ್ವದ ದೇಗುಲವಾದ ವಿಧಾನಸಭೆಗೆ ಕುಡಿದು ಬಂದಿದ್ದಾರೆ. ಈ ವ್ಯಕ್ತಿ ಗುರುದ್ವಾರಗಳಿಗೆ ಕುಡಿದು ಹೋಗುತ್ತಾರೆ, ದೇವಾಲಯಗಳಿಗೆ ಕುಡಿದು ಹೋಗುತ್ತಾರೆ, ಲೋಕಸಭೆಗೂ ಕುಡಿದು ಬರುತ್ತಿದ್ದರು. ವಿದೇಶದಲ್ಲಿ ಅತಿಯಾಗಿ ಮದ್ಯಪಾನ ಮಾಡಿದ್ದರಿಂದ ಅವರನ್ನು ವಿಮಾನದಿಂದಲೇ ಕೆಳಗಿಳಿಸಲಾಗಿತ್ತು” ಎಂದು ಮಾಲಿವಾಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ, “ಚುನಾವಣೆಗೂ ಮುನ್ನ ತಾಯಿಯ ತಲೆಯ ಮೇಲೆ ಕೈಯಿಟ್ಟು ‘ಮದ್ಯಪಾನ ಮಾಡುವುದಿಲ್ಲ’ ಎಂದು ಪ್ರಮಾಣ ಮಾಡಿದ್ದ ಮಾನ್ ಇಂದು ಗಡಿರಾಜ್ಯದ ಸಿಎಂ ಆಗಿ ಸದಾ ಅಮಲಿನಲ್ಲಿರುವುದು ನಾಚಿಕೆಗೇಡು. ಕುಡಿದು ಕಡತಗಳಿಗೆ ಸಹಿ ಹಾಕುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.
ಶಿರೋಮಣಿ ಅಕಾಲಿದಳ (ಎಸ್ಎಡಿ) ಕೂಡ ಸಿಎಂ ನಡವಳಿಕೆಯನ್ನು ತೀವ್ರವಾಗಿ ಖಂಡಿಸಿದೆ. ವಿಧಾನಸಭೆಯ ವಿಡಿಯೋ ತುಣುಕುಗಳನ್ನು ಬಿಡುಗಡೆ ಮಾಡಿರುವ ಅಕಾಲಿದಳ, “ಕಾರ್ಮಿಕ ದಿನದಂದು ಮದ್ಯ ಸೇವಿಸಿ ಸದನಕ್ಕೆ ಬಂದಿರುವುದು ಪಂಜಾಬ್ ಜನತೆಗೆ ಅವಮಾನ. ಭಗವಂತ್ ಮಾನ್ ಸಾರ್ವಜನಿಕವಾಗಿ ನಿಂತು ಡೋಪ್ ಟೆಸ್ಟ್ ಮಾಡಿಸಿಕೊಳ್ಳಲಿ” ಎಂದು ಸವಾಲು ಹಾಕಿದೆ.

