ಮಂಗಳೂರು : ಮೊಗೇರ ಸಂಘ (ರಿ) ಮಂಗಳೂರು ತಾಲೂಕು ಇದರ ನೇತೃತ್ವದಲ್ಲಿ ನಗರದ ಕೂಳೂರು ಪಂಜಿಮೊಗರುವಿನ ಮುಖ್ಯ ರಸ್ತೆಯ ಪಕ್ಕದಲ್ಲಿ ನಿರ್ಮಾಣಗೊಂಡಿರುವ “ಮೊಗೇರ ಸೌಧ” ಬಹುಮಹಡಿಗಳ ಕಟ್ಟಡವು 2026 ಮೇ 10 ರಂದು ಉದ್ಘಾಟನೆಗೊಳ್ಳಲಿದೆ ಎಂದು ಮಂಗಳೂರು ತಾಲೂಕು ಮೊಗೇರ ಸಂಘದ ಅಧ್ಯಕ್ಷರಾದ ಸೀತಾರಾಮ ಕೊಂಬಾಡಿ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಕೂಳೂರು ಕಾವೂರು ಮುಖ್ಯ ರಸ್ತೆಯ ಪಕ್ಕದಲ್ಲಿರುವ ಪಂಜಿಮೊಗರು ಎಂಬಲ್ಲಿ 0.20 ಎಕ್ರೆ ಜಮೀನನ್ನು ಮೊಗೇರ ಸಂಘವು ಖಾಸಗಿಯವರಿಂದ ಕ್ರಯಕ್ಕೆ ಪಡೆದುಕೊಂಡು ಸರಕಾರದ ಜನಪ್ರತಿನಿಧಿಗಳ ವಿಶೇಷ ಅನುದಾನವನ್ನು ಪಡೆದುಕೊಂಡು ಸುಮಾರು 20,000 (ಇಪ್ಪತ್ತು ಸಾವಿರ) ಚ.ಅಡಿ ವಿಸ್ತೀರ್ಣದ 4 ಅಂತಸ್ತಿನ ವಿಶಾಲವಾದ ಬಹುಮಹಡಿ ಕಟ್ಟಡವನ್ನು ನಿರ್ಮಾಣಗೊಳಿಸಲಾಗಿದೆ, ಕಟ್ಟಡದಲ್ಲಿ ಸಭಾಂಗಣ ಸೇರಿದಂತೆ ದೂರದ ಜಿಲ್ಲೆಗಳಿಂದ ವಿದ್ಯಾಭ್ಯಾಸ ಪಡೆಯಲು ಬರುವ ಬಡ ವರ್ಗದ ಪ.ಜಾತಿ/ಪ.ಪಂಗಡದ ಮಕ್ಕಳಿಗೆ ಉಳಿದು ಕೊಳ್ಳಲು ಹಾಸ್ಟೆಲ್ ವ್ಯವಸ್ಥೆಯನ್ನು ಹೊಂದಲಾಗಿದೆ. ಸಬಲೀಕರಣಗೊಳಿಸುವ ಉದ್ದೇಶದಿಂದ ಸ್ವ-ಉದ್ಯೋಗ ತರಬೇತಿ ಕೇಂದ್ರವು ಒಳಗೊಂಡಿದ್ದು ಜಿಲ್ಲೆಯ ಮಹಿಳೆಯರನ್ನು ದಲಿತ ಸಮಾಜದ ಇತಿಹಾಸದಲ್ಲಿ ತಮ್ಮ ಸ್ವಂತ ಪ್ರಯತ್ನದ ಮೂಲಕ ನೂತನ ಬಹುಮಹಡಿ ಕಟ್ಟಡವನ್ನು ಹೊಂದಿರುವುದು ಇದೇ ಮೊದಲು ಆಗಿರುತ್ತದೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಸಮಾಜ ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರು ಪಾಲ್ಗೊಳ್ಳಲಿದ್ದು, ಸಮುದಾಯ ಭವನದ ಉದ್ಘಾಟನೆಯನ್ನು ವಿಧಾನ ಸಭೆಯ ಸ್ಪೀಕರ್ ಯು.ಟಿ ಖಾದರ್, ಮೊಗೇರ ಸೌಧ ಬಹುಮಹಡಿ ಕಟ್ಟಡ ಸಂಕೀರ್ಣದ ಉದ್ಘಾಟನೆಯನ್ನು ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಡಾ.ಹೆಚ್.ಸಿ ಮಹದೇವಪ್ಪ, ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್, ವಿದ್ಯಾರ್ಥಿ ನಿಲಯದ ಉದ್ಘಾಟನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಬ್ರಿಜೇಶ್ ಚೌಟ, ಸ್ವ ಉದ್ಯೋಗ ತರಬೇತಿ ಕೇಂದ್ರದ ಉದ್ಘಾಟನೆಯನ್ನು ಕರ್ನಾಟಕ ಸರಕಾರದ ಮಾಜಿ ಸಚಿವರಾದ ನಾರಾಯಣ ಸ್ವಾಮಿ. ಸಂಘದ ನೂತನ ಕಚೇರಿಯ ಉದ್ಘಾಟನೆಯನ್ನು ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಶಾಸಕರೂ ಸ್ವಾಗತ ಸಮಿತಿಯ ಗೌರವಾಧ್ಯಕ್ಷರಾದ ಡಾ|ಭರತ್ ಶೆಟ್ಟಿ ವೈ, ಸ್ಮರಣ ಸಂಚಿಕೆ ಬಿಡುಗಡೆಯನ್ನು ಕರ್ನಾಟಕ ಸರಕಾರದ ಮಾಜಿ ಸಚಿವರಾದ ಎಸ್.ಅಂಗಾರ, ಮೊಗೇರ ಜಾತಿ ಸಮೀಕ್ಷೆ ಆ್ಯಪ್ ಗೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ ಮೋಹನ್ ಆಳ್ವ ಇವರು ಚಾಲನೆಯನ್ನು ನೀಡಲಿರುವರು.
ಅಂದು ಬೆಳಗ್ಗೆ 9.30 ಗಂಟೆಗೆ ಸರಿಯಾಗಿ ಕೂಳೂರು ಜಂಕ್ಷನ್ನಿಂದ ಪಂಜಿಮೊಗರುವಿನಲ್ಲಿರುವ ಮೊಗೇರ ಸೌಧದ ವರೆಗೆ ವಿವಿಧ ವೇಷಭೂಷಣ, ತಾಲೀಮ್ ಪ್ರದರ್ಶನ, ಕುಣಿತ ಭಜನೆಗಳ ಮೂಲಕ ವರ್ಣರಂಜಿತ ಮೆರವಣಿಗೆಯು ನಡೆದು ಬಳಿಕ ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮಗಳ ನಡೆಯಲಿರುವುದು ಸದ್ರಿ ಕಾರ್ಯಕ್ರಮದಲ್ಲಿ ಮೊಗೇರ ಸಮಾಜ ಸೇರಿದಂತೆ ಸಮಾಜದ ಎಲ್ಲಾ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮೊಗೇರ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಸುಂದರ ಮೇರ. ಮೊಗೇರ ಸಂಘದ ಪ್ರಧಾನ ಕಾರ್ಯದರ್ಶಿ ಗಿರಿಯಪ್ಪ ಎಸ್, ಕೋಶಾಧಿಕಾರಿ ನಾರಾಯಣ ಉಳ್ಳಾಲ್, ದಲಿತ ಮುಖಂಡರಾದ ಅಶೋಕ್ ಕೊಂಚಾಡಿ, ಮೊಗೇರ ಸಂಘದ ಉಪಾಧ್ಯಕ್ಷರಾದ ಗೋಪಾಲ ಕೃಷ್ಣಾಪುರ ಮತ್ತು ರಾಮ ಕೊಳಂಬೆ ಮೊದಲಾದವರು ಉಪಸ್ಥಿತರಿದ್ದರು.

