ಚಿಕ್ಕಬಳ್ಳಾಪುರ: ಮನೆಯವರು ನಿಶ್ಚಯಿಸಿದ್ದ ಮದುವೆಯನ್ನು ನಿರಾಕರಿಸಿ, ವರಸೆಯಲ್ಲಿ ತಮ್ಮನಾಗುವ ಯುವಕನೊಂದಿಗೆ ಯುವತಿಯೊಬ್ಬಳು ಪರಾರಿಯಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಪ್ರೀತಿ ಮತ್ತು ಸಂಪ್ರದಾಯಗಳ ನಡುವಿನ ಸಂಘರ್ಷ ಈಗ ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ದೇವನಹಳ್ಳಿ ತಾಲೂಕಿನ ಸಾವನಕನಹಳ್ಳಿ ನಿವಾಸಿ ಶಶಿಕಲಾ ಮತ್ತು ಹೊಸಕೋಟೆ ಹಳೆ ಊರಿನ ಪ್ರವೀಣ್ ಇಬ್ಬರೂ ಸಂಬಂಧಿಕರು. ವರಸೆಯಲ್ಲಿ ಪ್ರವೀಣ್ ಶಶಿಕಲಾಗೆ ತಮ್ಮನಾಗುತ್ತಾನೆ. ಆದರೆ ಇಬ್ಬರೂ ಕಳೆದ 3 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು ಎನ್ನಲಾಗಿದೆ.
ಮನೆಯವರು ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿ, ಶಶಿಕಲಾಗೆ ಬೇರೆ ಯುವಕನೊಂದಿಗೆ ಮದುವೆ ನಿಶ್ಚಯಿಸಿದ್ದರು. ಆದರೆ ಶಶಿಕಲಾ ತನ್ನ ಪ್ರೀತಿಗೆ ಪಟ್ಟು ಹಿಡಿದು, ಮದುವೆಗೆ ಒಪ್ಪಲಿಲ್ಲ. ಕೊನೆಗೆ ಮದುವೆಗೆ ಕೆಲವು ದಿನಗಳ ಮುಂಚೆಯೇ ಪ್ರವೀಣ್ ಜೊತೆ ಎಸ್ಕೇಪ್ ಆಗಿದ್ದಾಳೆ.

ಪರಾರಿಯಾದ ನಂತರ ಶಶಿಕಲಾ ಮತ್ತು ಪ್ರವೀಣ್ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ಅವರನ್ನು ಭೇಟಿ ಮಾಡಿ ಭದ್ರತೆ ಮತ್ತು ನ್ಯಾಯ ಕೋರಿದ್ದಾರೆ. ಈ ಸಂಬಂಧ ಚಿಕ್ಕಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಮಗಳ ಈ ನಡೆಯಿಂದ ಕಂಗಾಲಾದ ಪೋಷಕರು ತೀವ್ರ ಮಾನಸಿಕ ಆಘಾತಕ್ಕೆ ಒಳಗಾಗಿದ್ದಾರೆ. ಮದುವೆಗೆ ಬಂದಿದ್ದ ನೆಂಟರಿಷ್ಟರ ಮುಂದೆ ತಲೆ ತಗ್ಗಿಸುವಂತಾಗಿದೆ. ಸಂಪ್ರದಾಯ ಮತ್ತು ಪ್ರೀತಿಯ ನಡುವಿನ ಈ ಘಟನೆ ಸ್ಥಳೀಯರಲ್ಲಿ ಬೆರೆಸಿದ ಚರ್ಚೆಗೆ ಕಾರಣವಾಗಿದೆ.

