ಕಾಸರಗೋಡು: ಭಾವಿ ಪತಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ನೋವನ್ನು ತಾಳಲಾರದೆ 26 ವರ್ಷದ ಯುವತಿಯೊಬ್ಬಳು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಕುಂಬ್ಳೆ ಸಮೀಪದ ಕಿದೂರಿನಲ್ಲಿ ನಡೆದಿದೆ.
ಕಿದೂರಿನ ಕುಂದಂಕರಾಡುಕ್ಕ ನಿವಾಸಿ ಬಿ.ಜಯಾನಂದನ್ ಅವರ ಪುತ್ರಿ ಪ್ರಫುಲ್ಲಾ (26) ಮೃತಪಟ್ಟ ಯುವತಿ. ಈಕೆಗೆ ತಮಿಳುನಾಡು ಮೂಲದ ಮಣಿ (30) ಎಂಬುವವರೊಂದಿಗೆ ವಿವಾಹ ನಿಶ್ಚಯವಾಗಿತ್ತು.
ಕೆಲವು ದಿನಗಳ ಹಿಂದೆ ನಡೆದ ಭೀಕರ ಬೈಕ್ ಅಪಘಾತದಲ್ಲಿ ಮಣಿ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಭಾವಿ ಪತಿಯ ಅಗಲಿಕೆಯಿಂದ ಪ್ರಫುಲ್ಲಾ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂದು ಕುಟುಂಬದವರು ಹಾಗೂ ಸಂಬಂಧಿಕರು ತಿಳಿಸಿದ್ದಾರೆ.
ಭಾನುವಾರ ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯೊಳಗಿನ ಅವಧಿಯಲ್ಲಿ ಈ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ. ಮನೆಯ ಸದಸ್ಯರು ಸಂಬಂಧಿಕರ ವಿವಾಹ ಸಮಾರಂಭಕ್ಕೆ ತೆರಳಿದ್ದ ವೇಳೆ ಪ್ರಫುಲ್ಲಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಘಟನೆಯ ಮಾಹಿತಿ ತಿಳಿದು ಕುಂಬ್ಳೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಆತ್ಮಹತ್ಯೆಗೆ ಮುನ್ನ ಪ್ರಫುಲ್ಲಾ ಬರೆದಿದ್ದಾರೆ ಎನ್ನಲಾದ ಪತ್ರವೊಂದು ಪೊಲೀಸರಿಗೆ ಲಭ್ಯವಾಗಿದೆ. ಅದರಲ್ಲಿ “ನನ್ನನ್ನು ಮಣಿಯನ್ನು ಹೂಳಲಾದ ಸ್ಥಳದಲ್ಲೇ ದಫನ ಮಾಡಬೇಕು” ಎಂದು ಭಾವನಾತ್ಮಕವಾಗಿ ಉಲ್ಲೇಖಿಸಿರುವುದಾಗಿ ತಿಳಿದುಬಂದಿದೆ.
ಈ ಕುರಿತಂತೆ ಎರಡೂ ಕುಟುಂಬದ ಸದಸ್ಯರು ಚರ್ಚಿಸಿ ಅಂತ್ಯಸಂಸ್ಕಾರದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ

