ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಕೋಲ್ಕತ್ತಾ ಹೈಕೋರ್ಟ್ಗೆ ವಕೀಲರ ಉಡುಪಿನಲ್ಲಿ ಹಾಜರಾಗಿದ್ದು ರಾಜಕೀಯ ವಲಯದಲ್ಲಿ ಚರ್ಚೆಯ ವಿಷಯವಾಗಿದೆ.
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಂದು ವಕೀಲರ ಕರಿ ಕೋಟ್ ಧರಿಸಿ ಮೊದಲ ಬಾರಿಗೆ ಕೊಲ್ಕತ್ತಾ ಹೈಕೋರ್ಟ್ಗೆ ಹಾಜರಾಗಿ ಎಲ್ಲರ ಗಮನ ಸೆಳೆದರು. ರಾಜ್ಯದಲ್ಲಿ ನಡೆಯುತ್ತಿರುವ ಚುನಾವಣೋತ್ತರ ಹಿಂಸಾಚಾರದ ಕುರಿತಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (PIL) ಪರವಾಗಿ ವಾದ ಮಂಡಿಸಲು ಅವರು ಖುದ್ದಾಗಿ ನ್ಯಾಯಾಲಯಕ್ಕೆ ಆಗಮಿಸಿದ್ದರು.

ನ್ಯಾಯಾಲಯದಲ್ಲಿ ತಮ್ಮ ವಾದ ಮಂಡಿಸಿದ ಮಮತಾ ಬ್ಯಾನರ್ಜಿ, “ನಾನು ಇಲ್ಲಿ ವಕೀಲೆಯಾಗಿ ಈ ಪ್ರಕರಣದಲ್ಲಿ ಹೋರಾಡುತ್ತಿದ್ದೇನೆ. ಹೈಕೋರ್ಟ್ನಲ್ಲಿ ಇದು ನನ್ನ ಮೊದಲ ಹಾಜರಾತಿಯಾಗಿದ್ದು, ಗೌರವಾನ್ವಿತ ನ್ಯಾಯಾಧೀಶರಿಗೆ ನನ್ನ ನಮನಗಳು” ಎಂದು ಮಾತು ಆರಂಭಿಸಿದರು. ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯ ಫಲಿತಾಂಶದ ನಂತರ ಟಿಎಂಸಿ ಕಾರ್ಯಕರ್ತರ ಮೇಲೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಯುತ್ತಿದೆ ಎಂದು ಅವರು ಆರೋಪಿಸಿ, ತಮ್ಮ ವಾದ ಮಂಡಿಸಿದರು.
ಪೊಲೀಸರ ಸಮ್ಮುಖದಲ್ಲೇ ತಮ್ಮ ಪಕ್ಷದ ಕಚೇರಿಗಳನ್ನು ಲೂಟಿ ಮಾಡಿದ್ದಾರೆ ಈಗಾಗಲೇ ಗಲಭೆಯಿಂದ 10 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 160 ಪಕ್ಷದ ಕಚೇರಿಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಅವರು ಗಮನಸೆಳೆದರು. “ಕೊಲೆಯಾದ 10 ಜನರಲ್ಲಿ 6 ಮಂದಿ ಹಿಂದೂಗಳು. ಪೊಲೀಸರು ಎಫ್ಐಆರ್ ದಾಖಲಿಸಲು ಸಹ ಸಿದ್ಧರಿಲ್ಲ. ನನ್ನ ಕುಟುಂಬದ 12 ವರ್ಷದ ಬಾಲಕಿಯರಿಗೂ ಅತ್ಯಾಚಾರ ಬೆದರಿಕೆ ಇದೆ. ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋಗಲು ಸಾಧ್ಯವಾಗದ ಕಾರಣ, ನಾನು ಆನ್ಲೈನ್ನಲ್ಲಿ ದೂರು ದಾಖಲಿಸುತ್ತಿದ್ದೇನೆ” ಎಂದು ಮಮತಾ ನ್ಯಾಯಾಲಯಕ್ಕೆ ತಿಳಿಸಿದರು.
ಪೊಲೀಸರ ವಿರುದ್ಧ ಕಿಡಿಕಾರಿದ ಮಮತಾ ಹಿಂಸಾಚಾರ ನಡೆಯುತ್ತಿದ್ದರೂ ಪೊಲೀಸರು ಎಫ್ಐಆರ್ ದಾಖಲಿಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿದ ಅವರು, “ಪೊಲೀಸರು ಮಲಗಿದ್ದಾರೆಯೇ? ಅಪರಾಧ ನಡೆದ ಮೇಲೆ ತನಿಖೆ ಮಾಡುವುದು ಅವರ ಕರ್ತವ್ಯವಲ್ಲವೇ?” ಎಂದು ಪ್ರಶ್ನಿಸಿದರು.

92 ವರ್ಷದ ವಿಧವೆ ಸೇರಿದಂತೆ ಪರಿಶಿಷ್ಟ ಜಾತಿಯ ಕುಟುಂಬಗಳನ್ನು ಮನೆಯಿಂದ ಹೊರಹಾಕಲಾಗಿದೆ ಎಂದು ದೂರಿದ ಮಮತಾ, ಬಂಗಾಳದ ಜನರಿಗೆ ತಕ್ಷಣದ ರಕ್ಷಣೆ ನೀಡುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸುಜಯ್ ಪಾಲ್ ಮತ್ತು ನ್ಯಾಯಮೂರ್ತಿ ಪಾರ್ಥಸಾರಥಿ ಸೇನ್ ಅವರಿದ್ದ ಪೀಠಕ್ಕೆ ಮನವಿ ಮಾಡಿದರು.
2026 ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆಲ್ಲುವ ಮೂಲಕ ಇತಿಹಾಸ ಬರೆದಿದೆ, ಕೇವಲ 80 ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾದ ತೃಣಮೂಲ ಕಾಂಗ್ರೆಸ್ನ 15 ವರ್ಷಗಳ ಆಳ್ವಿಕೆಯನ್ನು ಕೊನೆಗೊಳಿಸಿತು.
2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಟಿಎಂಸಿ ಸೋಲನ್ನನುಭವಿಸಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹಿಂಸಾಚಾರ ವರದಿಯಾಗಿದೆ. ಟಿಎಂಸಿ ನಾಯಕ ಕಲ್ಯಾಣ್ ಬ್ಯಾನರ್ಜಿ ಅವರ ಪುತ್ರ ಶೀರ್ಷಣ್ಯ ಬ್ಯಾನರ್ಜಿ ಅವರು ಈ ಕುರಿತು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ತಮ್ಮ ಪಕ್ಷದ ಕಾರ್ಯಕರ್ತರ ಪರವಾಗಿ ಧ್ವನಿ ಎತ್ತಲು ಮಮತಾ ಬ್ಯಾನರ್ಜಿ ಅವರೇ ನೇರವಾಗಿ ನ್ಯಾಯಾಲಯಕ್ಕೆ ಇಳಿದಿರುವುದು ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.

