ಲುದಿಯಾನ : ಕಳೆದ 6 ದಿನಗಳಿಂದ ನಾಪತ್ತೆಯಾಗಿದ್ದ ಪಂಜಾಬಿ ಗಾಯಕಿ ಇಂದರ್ ಕೌರ್ ಅಲಿಯಾಸ್ ಯಶಿಂದರ್ ಕೌರ್ ನೀಲನ್ ಕಾಲುವೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಲುಧಿಯಾನ ಪೊಲೀಸರು ಮಂಗಳವಾರ ದೃಢಪಡಿಸಿದ್ದಾರೆ
ಮದುವೆಯಾಗಲು ಒಪ್ಪದ ಒಂದೇ ಒಂದು ಕಾರಣಕ್ಕೆ ಪ್ರಸಿದ್ಧ ಗಾಯಕಿಯನ್ನು ಅಪಹರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪಂಜಾಬಿನ ಖ್ಯಾತ ಗಾಯಕಿ ಇಂದರ್ ಕೌರ್ (29) (ಯಶಿಂದರ್ ಕೌರ್) ಅವರ ಭೀಕರ ಹತ್ಯೆ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಆರು ದಿನಗಳ ಹಿಂದೆ ಬಂದೂಕು ತೋರಿಸಿ ಅಪಹರಿಸಲಾಗಿತ್ತು. ಮಂಗಳವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ನೀಲನ್ ಕಾಲುವೆಯಲ್ಲಿ ಮೃತದೇಹ ಪತ್ತೆಯಾಗಿದ್ದು, ತಕ್ಷಣ ಅವರ ಮೃತದೇಹವನ್ನು ಹೊರತೆಗೆಯಲಾಯಿತು.

ಪಂಜಾಬಿ ಸಂಗೀತ ಕ್ಷೇತ್ರದಲ್ಲಿ ತನ್ನದೇ ಆದ ಗುರುತನ್ನು ಮೂಡಿಸಿದ್ದ ಇಂದರ್ ಕೌರ್, ಸಾಮಾಜಿಕ ಜಾಲತಾಣಗಳಲ್ಲೂ ಸಾಕಷ್ಟು ಜನಪ್ರಿಯರಾಗಿದ್ದರು. ಇನ್ಸ್ಟಾಗ್ರಾಂನಲ್ಲಿ 1.24 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದ ಅವರು, ತಮ್ಮ ಹಾಡುಗಳು ಮತ್ತು ವಿಡಿಯೋಗಳ ಮೂಲಕ ಯುವಜನರಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿದ್ದರು.
ಮೇ 13ರಂದು ರಾತ್ರಿ ಸುಮಾರು 8:30ರ ವೇಳೆಗೆ ಇಂದರ್ ಕೌರ್ ತಮ್ಮ ಕಾರಿನಲ್ಲಿ ಪಡಿತರ ಸಾಮಗ್ರಿ ತರಲು ಮಾರುಕಟ್ಟೆಗೆ ತೆರಳಿದ್ದರು. ಆದರೆ ರಾತ್ರಿ ಕಳೆದರೂ ಮನೆಗೆ ಮರಳದ ಹಿನ್ನೆಲೆ ಕುಟುಂಬದವರು ಆತಂಕಗೊಂಡು ಎಲ್ಲೆಡೆ ಹುಡುಕಾಟ ನಡೆಸಿದರು. ಬಳಿಕ ಪೊಲೀಸರಿಗೆ ದೂರು ನೀಡಲಾಗಿತ್ತು.

ಇಂದರ್ ಕುಟುಂಬಸ್ಥರು ಮೋಗಾದ ಭಾಲೂರ್ ಗ್ರಾಮದ ಸುಖ್ವಿಂದರ್ ಸಿಂಗ್ ಅಲಿಯಾಸ್ ಸುಖಾ ಎಂಬಾತನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ಸುಖ್ವಿಂದರ್ ಹಲವು ದಿನಗಳಿಂದ ಇಂದರ್ ಅವರನ್ನು ಬಲವಂತವಾಗಿ ಮದುವೆಯಾಗಲು ಒತ್ತಾಯಿಸುತ್ತಿದ್ದ ಎನ್ನಲಾಗಿದೆ. ಆದರೆ ಇಂದರ್ ನಿರಾಕರಿಸಿದ್ದರು. ಇದೇ ಕಾರಣದಿಂದ ಆಕ್ರೋಶಗೊಂಡ ಸುಖ್ವಿಂದರ್ ಈ ಅಪಹರಣ ಮತ್ತು ಹತ್ಯೆ ಸಂಚು ರೂಪಿಸಿದ್ದಾನೆ ಎಂದು ಕುಟುಂಬ ಆರೋಪಿಸಿದೆ.
ಕುಟುಂಬದವರ ಹೇಳಿಕೆಯ ಪ್ರಕಾರ, ಸುಖ್ವಿಂದರ್ ಸಿಂಗ್ ಕೆನಡಾದಿಂದ ಪಂಜಾಬ್ಗೆ ಬಂದಿದ್ದ. ಮೇ 13ರಂದು ಕೆಲ ಸಹಚರರೊಂದಿಗೆ ಸೇರಿ ಇಂದರ್ ಅವರ ಕಾರನ್ನು ಅಡ್ಡಗಟ್ಟಿ, ಬಂದೂಕು ತೋರಿಸಿ ಅಪಹರಿಸಿದ್ದಾನೆ ಎನ್ನಲಾಗಿದೆ. ಬಳಿಕ ಅವರನ್ನು ಕೊಲೆ ಮಾಡಿ, ಸಾಕ್ಷ್ಯ ನಾಶಪಡಿಸಲು ಶವವನ್ನು ಕಾಲುವೆಗೆ ಎಸೆದಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ.

ಕೃತ್ಯ ಎಸಗಿದ ನಂತರ ಪ್ರಮುಖ ಆರೋಪಿ ಸುಖ್ವಿಂದರ್ ಮತ್ತೆ ಕೆನಡಾಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆ ಆರೋಪಿಯನ್ನು ಭಾರತಕ್ಕೆ ಕರೆತರಲು ಕಾನೂನು ಪ್ರಕ್ರಿಯೆಗಳು ಆರಂಭಗೊಂಡಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಮುಖ ಆರೋಪಿ ಸುಖ್ವಿಂದರ್ ಸಿಂಗ್ ಹಾಗೂ ಆತನ ಸಹಚರ ಕರಮ್ಜಿತ್ ಸಿಂಗ್ ವಿರುದ್ಧ ಮೇ 15ರಂದು ಪ್ರಕರಣ ದಾಖಲಾಗಿತ್ತು. ಆದರೆ ಪೊಲೀಸರು ಸಮಯಕ್ಕೆ ಸರಿಯಾಗಿ ಕ್ರಮ ಕೈಗೊಂಡಿಲ್ಲ ಎಂಬ ಆರೋಪವನ್ನು ಇಂದರ್ ಕುಟುಂಬಸ್ಥರು ಮಾಡುತ್ತಿದ್ದಾರೆ. “ಪೊಲೀಸರು ತಕ್ಷಣ ಕ್ರಮ ತೆಗೆದುಕೊಂಡಿದ್ದರೆ ನಮ್ಮ ಮಗಳು ಇಂದು ಬದುಕಿರುತ್ತಿದ್ದರು” ಎಂದು ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಜಮಾಲ್ಪುರ ಪೊಲೀಸ್ ಠಾಣಾಧಿಕಾರಿ ಬಲ್ಬೀರ್ ಸಿಂಗ್, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಬಂಧನಕ್ಕೆ ಬಲೆ ಬೀಸಲಾಗಿದೆ. ಜೊತೆಗೆ ಕೆನಡಾಕ್ಕೆ ತೆರಳಿರುವ ಪ್ರಮುಖ ಆರೋಪಿಯನ್ನು ಭಾರತಕ್ಕೆ ಕರೆತರಲು ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

