ತೆಲಂಗಾಣ : ಹನುಮಕೊಂಡದಲ್ಲಿರುವ 15 ವರ್ಷದ ಬಾಲಕ ಗಂಭೀರ ನರವೈಜ್ಞಾನಿಕ ಸಮಸ್ಯೆಯಿಂದ ಬಳಲುತ್ತಿದ್ದು ದುರದೃಷ್ಟವಶಾತ್, 15 ವರ್ಷ ವಯಸ್ಸಿನವನಾಗಿದ್ದರೂ, ಈ ಕಾಯಿಲೆಯಿಂದಾಗಿ ಆತ ಎರಡು ಅಥವಾ ಮೂರು ವರ್ಷದ ಮಗುವಿನಂತೆ ಕಾಣುತ್ತಾನೆ ಮತ್ತು ಅವನ ಕಾಲುಗಳು ಸಹ ಕೆಲಸ ಮಾಡುವುದಿಲ್ಲ. ಜೀವನದೊಂದಿಗೆ ಹೋರಾಡುತ್ತಿರುವ ಮಗುವಿಗೆ ಏಕೈಕ ಆಸೆಯೆಂದರೆ ತನ್ನ ನೆಚ್ಚಿನ ನಾಯಕ ಪವನ್ ಕಲ್ಯಾಣ್ ಅವರನ್ನು ಭೇಟಿಯಾಗುವುದು.

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಮತ್ತು ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರು ತಮ್ಮ ಸದಾಶಯದ ಮೂಲಕ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ. ಅಪರೂಪದ ತಳಿವಿಜ್ಞಾನ ಸಂಬಂಧಿತ ‘ಡಿಎಂಡಿ’ (DMD -Duchenne Muscular Dystrophy) ಕಾಯಿಲೆಯಿಂದ ಬಳಲುತ್ತಾ, ದೈಹಿಕ ಬೆಳವಣಿಗೆಯಿಲ್ಲದೆ ಹಾಸಿಗೆ ಹಿಡಿದಿರುವ 15 ವರ್ಷದ ಯುವ ಅಭಿಮಾನಿಯ ಕೊನೆಯ ಆಸೆಯನ್ನು ಅವರು ಈಡೇರಿಸಿದ್ದಾರೆ. ತೆಲಂಗಾಣದ ಹನುಮಕೊಂಡದಲ್ಲಿರುವ ಅಭಿಮಾನಿಯ ಮನೆಗೇ ಸ್ವತಃ ಭೇಟಿ ನೀಡಿ ಆತನಿಗೆ ಧೈರ್ಯ ತುಂಬಿದ್ದಾರೆ.

ಹನುಮಕೊಂಡ ಪಟ್ಟಣದ ಹನುಮಾನ್ ನಗರದ ನಿವಾಸಿಯಾದ ನಿರಂಜನ್ (15) ಎಂಬ ಬಾಲಕ ತೀವ್ರ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾನೆ.ತನ್ನ ಜೀವಿತಾವಧಿಯ ಕೊನೆಯ ಆಸೆಯಾಗಿ ಒಮ್ಮೆಯಾದರೂ ನಟ ಪವನ್ ಕಲ್ಯಾಣ್ ಅವರನ್ನು ಭೇಟಿಯಾಗಬೇಕೆಂದು ಆತ ಹಂಬಲಿಸುತ್ತಿದ್ದ. ತೆಲಂಗಾಣದ ಜನಸೇನಾ ನಾಯಕರ ಮೂಲಕ ಈ ವಿಷಯ ಪವನ್ ಕಲ್ಯಾಣ್ ಅವರ ಗಮನಕ್ಕೆ ಬಂದ ತಕ್ಷಣ, ಅವರು ಬುಧವಾರ ಬೆಳಗ್ಗೆಯೇ ನೇರವಾಗಿ ನಿರಂಜನ್ ನಿವಾಸಕ್ಕೆ ಧಾವಿಸಿದರು. ಪವನ್ ಕಲ್ಯಾಣ್ ಅವರ ಈ ಸ್ಪಂದನೆಗೆ ಕುಟುಂಬಸ್ಥರು ಮತ್ತು ನೆರೆಯವರು ಭಾವುಕರಾದರು.

ಚಲನವಲನವಿಲ್ಲದೆ ಹಾಸಿಗೆಯಲ್ಲೇ ಮಲಗಿದ್ದ ಅಭಿಮಾನಿ ನಿರಂಜನ್ ಸ್ಥಿತಿಯನ್ನು ಕಂಡು ಪವನ್ ಕಲ್ಯಾಣ್ ತೀವ್ರ ಭಾವುಕರಾದರು. ಆತನ ಹಾಸಿಗೆಯ ಮೇಲೆಯೇ ಕುಳಿತು, ಆತ್ಮೀಯವಾಗಿ ಆತನ ಹಣೆಗೊಂದು ಮುತ್ತಿಟ್ಟು ಮಾತನಾಡಿಸಿದರು.“ಚಿಕ್ಕಂದಿನಿಂದಲೂ ನೀವೆಂದರೆ ನನಗೆ ತುಂಬಾ ಇಷ್ಟ ಸ್ವಾಮಿ” ಎಂದು ನಿರಂಜನ್ ಹೇಳಿದ ಮಾತುಗಳನ್ನು ಕೇಳಿ ಪವನ್ ಕಲ್ಯಾಣ್ ಅವರ ಕಣ್ಣಾಲಿಗಳು ಒದ್ದೆಯಾದವು. ಬಾಲಕನ ಪೋಷಕರಾದ ಪೊನುಗೋಟಿ ರಾಂಗೋಪಾಲ್ ಮತ್ತು ಮಾನಸ ಅವರೊಂದಿಗೆ ಮಾತನಾಡಿ, ವೈದ್ಯಕೀಯ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆದರು. ನಿರಂಜನ್ಗೆ ಧೈರ್ಯ ತುಂಬುತ್ತಾ,“ನೀನು ಶೀಘ್ರವೇ ಗುಣಮುಖನಾಗುತ್ತೀಯ” ಎಂದು ಆಶೀರ್ವದಿಸಿದರು.

ಬಾಲಕನ ಮುಂದಿನ ವೈದ್ಯಕೀಯ ಚಿಕಿತ್ಸೆಯ ವೆಚ್ಚಕ್ಕಾಗಿ ಪವನ್ ಕಲ್ಯಾಣ್ ಸ್ಥಳದಲ್ಲೇ ₹1 ಲಕ್ಷ ಆರ್ಥಿಕ ನೆರವು ಹಸ್ತಾಂತರಿಸಿದರು. ಇದರೊಂದಿಗೆ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಿಂದ ವಿಶೇಷವಾಗಿ ತರಿಸಲಾಗಿದ್ದ ಪವಿತ್ರ ಶೇಷವಸ್ತ್ರವನ್ನು ಬಾಲಕನಿಗೆ ಹೊದಿಸಿ, ಕಲ್ಯಾಣ ಅಕ್ಷತೆ ಹಾಗೂ ತೀರ್ಥಪ್ರಸಾದ ನೀಡಿ ಆಶೀರ್ವದಿಸಿದರು. “ಈ ಪ್ರಸಾದವು ನಿನಗೆ ಶಕ್ತಿ ಮತ್ತು ಆರೋಗ್ಯವನ್ನು ತಂದುಕೊಡಲಿ” ಎಂದು ಹಾರೈಸಿದರು.

ನಿರಂಜನ್ ಶೀಘ್ರ ಗುಣಮುಖನಾಗಲಿ ಎಂದು ವರಂಗಲ್ನ ಪ್ರಸಿದ್ಧ ಭದ್ರಕಾಳಿ ಅಮ್ಮನವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸುವುದಾಗಿ ಪವನ್ ಕಲ್ಯಾಣ್ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ, ಪೂಜೆ ಮುಗಿದ ನಂತರ ಅಮ್ಮನವರ ಬೆಳ್ಳಿಯ ವಿಗ್ರಹವನ್ನು ತಂದು ನೀಡುವುದಾಗಿ ಕುಟುಂಬಸ್ಥರಿಗೆ ಮಾತು ಕೊಟ್ಟಿದ್ದಾರೆ. ಯುವ ಅಭಿಮಾನಿಯೊಬ್ಬನ ಆಸೆಗೆ ಸ್ಪಂದಿಸಿ, ರಾಜಕೀಯ ಬ್ಯುಸಿ ಶೆಡ್ಯೂಲ್ ನಡುವೆಯೂ ಹನುಮಕೊಂಡಕ್ಕೆ ಭೇಟಿ ನೀಡಿದ ಡೆಪ್ಯುಟಿ ಸಿಎಂ ಪವನ್ ಕಲ್ಯಾಣ್ ಅವರ ಈ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ. “ನಿಜವಾದ ನಾಯಕ ಮಾನವೀಯತೆಯನ್ನು ಮೆರೆಯುವವನು” ಎಂದು ಅನೇಕ ಅಭಿಮಾನಿಗಳು ಟ್ವೀಟ್ ಮಾಡಿದ್ದಾರೆ.

