ಮಂಗಳೂರು: ಸ್ವಾಮಿ ವಿವೇಕಾನಂದರ ಜನ್ಮದಿನದ ಅಂಗವಾಗಿ ನಡೆಯುವ ರಾಷ್ಟ್ರೀಯ ಯುವಜನೋತ್ಸವವನ್ನು ‘ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್’ ಹೆಸರಿನಲ್ಲಿ ಆಯೋಜಿಸಲಾಗುತ್ತಿದ್ದು, 15ರಿಂದ 29 ವರ್ಷದ ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮೈ ಭಾರತ್ ಜಿಲ್ಲಾ ಡೆಪ್ಯೂಟಿ ಡೈರೆಕ್ಟರ್ ಉಲ್ಲಾಸ್ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯುವಜನರ ಪ್ರತಿಭೆ, ಜ್ಞಾನ ಹಾಗೂ ಸೃಜನಶೀಲತೆಗೆ ರಾಷ್ಟ್ರಮಟ್ಟದ ವೇದಿಕೆ ಕಲ್ಪಿಸುವ ಉದ್ದೇಶದಿಂದ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ‘ವಿಕಸಿತ ಭಾರತ ಚಾಲೆಂಜಸ್ ಟ್ರ್ಯಾಕ್’, ಸಾಂಸ್ಕೃತಿಕ ವಿಭಾಗ, ‘ಇನ್ನೊವೇಷನ್ ಫಾರ್ ಭಾರತ್’, ‘ಡಿಸೈನ್ ಫಾರ್ ಭಾರತ್’, ‘ಹ್ಯಾಕ್ ಆಫ್ ಸೋಷಿಯಲ್ ಕಾಸ್’ ಹಾಗೂ ‘ಯೂತ್ ಎಂಟರ್ಪ್ರೆನ್ಯೂರ್ಶಿಪ್ ಚಾಲೆಂಜ್’ ಸೇರಿದಂತೆ ಹಲವು ವಿಭಾಗಗಳಲ್ಲಿ ಅವಕಾಶವಿದೆ ಎಂದರು.

ಜಿಲ್ಲಾಮಟ್ಟದ ಕ್ವಿಜ್ ಸ್ಪರ್ಧೆ ಆರಂಭಗೊಂಡಿದ್ದು, ಸೆ.30 ನೋಂದಣಿಗೆ ಕೊನೆಯ ದಿನವಾಗಿದೆ. ಉತ್ತಮ ಸಾಧನೆ ಮಾಡುವ ಶೇ.10ರಷ್ಟು ಸ್ಪರ್ಧಿಗಳು ಮುಂದಿನ ಹಂತಕ್ಕೆ ಆಯ್ಕೆಯಾಗಲಿದ್ದು, ಬಳಿಕ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸ್ಪರ್ಧೆ ನಡೆಯಲಿದೆ. ರಾಷ್ಟ್ರಮಟ್ಟದಲ್ಲಿ ಆಯ್ಕೆಯಾದವರಿಗೆ ಕೇಂದ್ರ ಸಚಿವರು ಹಾಗೂ ಪ್ರಧಾನಮಂತ್ರಿಯವರ ಮುಂದೆ ತಮ್ಮ ಆಲೋಚನೆಗಳನ್ನು ಮಂಡಿಸುವ ಅವಕಾಶ ದೊರೆಯಲಿದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯ ಹೆಚ್ಚಿನ ಯುವಜನರು ಸ್ಪರ್ಧೆಯಲ್ಲಿ ಭಾಗವಹಿಸಿ ರಾಷ್ಟ್ರಮಟ್ಟ ತಲುಪುವ ಮೂಲಕ ಜಿಲ್ಲೆಯ ಕೀರ್ತಿ ಹೆಚ್ಚಿಸಬೇಕು ಎಂದು ಉಲ್ಲಾಸ್ ಕರೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಎನ್ಎಸ್ಎಸ್ ನೋಡೆಲ್ ಅಧಿಕಾರಿ ಸೀಮಾ ಹಾಗೂ ಆಡಳಿತಾಧಿಕಾರಿ ಜಗದೀಶ್ ಉಪಸ್ಥಿತರಿದ್ದರು.

