ಚೆನೈ: ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಭೀಕರ ಸ್ಫೋಟ ಸಂಭವಿಸಿದೆ. ಮಸರಪಟ್ಟಿ ಗ್ರಾಮದ ಖಾಸಗಿ ಪಟಾಕಿ ಕಾರ್ಖಾನೆಯಲ್ಲಿ ಶನಿವಾರ ಸಂಜೆ ಭಾರಿ ಸ್ಫೋಟ ಸಂಭವಿಸಿದ್ದು. ಒಬ್ಬ ಉದ್ಯೋಗಿ ಸ್ಥಳದಲ್ಲೇ ಸಾವನ್ನಪ್ಪಿದರೆ, 25 ಕ್ಕೂ ಹೆಚ್ಚು ಕಾರ್ಮಿಕರು ಗಂಭೀರ ಸುಟ್ಟ ಗಾಯಗೊಂಡಿದ್ದಾರೆ .ಸ್ಫೋಟ ಎಷ್ಟು ಪ್ರಬಲವಾಗಿತ್ತೆಂದರೆ ಕಾರ್ಖಾನೆ ಆವರಣದ ಒಂದು ಭಾಗವು ಸಂಪೂರ್ಣವಾಗಿ ಕುಸಿದು ಬಿದ್ದಿದೆ.
ವಾರಾಂತ್ಯವಾಗಿದ್ದರಿಂದ ಕಾರ್ಖಾನೆಯಲ್ಲಿ 50 ಕ್ಕೂ ಹೆಚ್ಚು ಕಾರ್ಮಿಕರು ಹಾಜರಿದ್ದರು. ಕೆಲವರು ವಾರದ ಸಂಬಳವನ್ನು ಸಂಗ್ರಹಿಸುತ್ತಿದ್ದರೆ, ಇನ್ನು ಕೆಲವರು ಪಟಾಕಿಗಳನ್ನು ತಯಾರಿಸುತ್ತಿದ್ದರು. ಇದ್ದಕ್ಕಿದ್ದಂತೆ, ಒಂದು ಕೋಣೆಯಲ್ಲಿ ಸಂಗ್ರಹಿಸಲಾಗಿದ್ದ ಪಟಾಕಿಗಳು ಸ್ಫೋಟಗೊಂಡ ಪರಿಣಾಮ, ಈ ದುರಂತ ಸಂಭವಿಸಿದೆ
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಮೃತ ಉದ್ಯೋಗಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಸ್ಫೋಟದ ಕಾರಣವನ್ನು ಕಂಡುಹಿಡಿಯಲು ಪ್ರಸ್ತುತ ಹೆಚ್ಚಿನ ತನಿಖೆ ನಡೆಯುತ್ತಿದೆ.

