ಕಾಸರಗೋಡು: ಇಂದು ಯುವ ಪೀಳಿಗೆಯನ್ನು ಸಹ ಬಾಧಿಸುತ್ತಿರುವ ಜೀವನಶೈಲಿ ಕಾಯಿಲೆಗಳಿಗೆ ಮತ್ತು ಮಾನಸಿಕ ಒತ್ತಡಕ್ಕೆ ಯೋಗದ ಮೂಲಕ ಪರಿಹಾರ ಸಾಧ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದರು. ಬಿಜೆಪಿ ಜಿಲ್ಲಾ ಸಮಿತಿಯ ವತಿಯಿಂದ ಡಾ. ಶ್ಯಾಮಪ್ರಸಾದ್ ಮುಖರ್ಜಿ ಮಂದಿರದಲ್ಲಿ ಹಮ್ಮಿಕೊಳ್ಳಲಾಗಿದ್ದ 12ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಆಧುನಿಕ ವೈದ್ಯಕೀಯ ವಿಜ್ಞಾನ ಮತ್ತು ಯೋಗ ಎರಡೂ ಸೇರಿದರೆ ಮಾನವಕುಲದ ಆರೋಗ್ಯದ ಸವಾಲುಗಳಿಗೆ ಒಂದು ಮಟ್ಟದವರೆಗೆ ಪರಿಹಾರ ಕಂಡುಕೊಳ್ಳಬಹುದು. ಆದರೆ, ಅನೇಕ ಸರ್ಕಾರಗಳು ಮತ್ತು ಸಂಸ್ಥೆಗಳು ಯೋಗವನ್ನು ಕೇವಲ ಒಂದು ಕ್ರೀಡೆಯಾಗಿ ಮಾತ್ರ ತರಬೇತಿ ನೀಡಲು ಆಸಕ್ತಿ ತೋರಿಸುತ್ತಿವೆ, ಇದು ಯೋಗದ ಸಂಪೂರ್ಣ ಪ್ರಯೋಜನಗಳು ಜನರಿಗೆ ದೊರೆಯದಂತೆ ಮಾಡುತ್ತಿದೆ ಎಂದು ಅಶ್ವಿನಿ ತಿಳಿಸಿದರು.

ಹಲವಾರು ಯೋಗ ಚಾಂಪಿಯನ್ಶಿಪ್ಗಳಲ್ಲಿ ಚಿನ್ನದ ಪದಕ ವಿಜೇತೆ ಹಾಗೂ ಯೋಗಾಭ್ಯಾಸದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಮತ್ತು ಏಷ್ಯನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಸಾಧಕಿ ಕುಮಾರಿ ಅಭಿಜ್ಞಾ ಮತ್ತು ಯೋಗ ಶಿಕ್ಷಕಿ ತೇಜ ಹರೀಶ್ ಯೋಗ ತರಬೇತಿಯ ನೇತೃತ್ವ ವಹಿಸಿದ್ದರು.
ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ಸವಿತಾ ಟೀಚರ್, ಬಿಜೆಪಿ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್. ಸುನಿಲ್ ಮತ್ತು ಕಾಸರಗೋಡು ಮಂಡಲ ಅಧ್ಯಕ್ಷ ಗುರುಪ್ರಸಾದ್ ಪ್ರಭು ಉಪಸ್ಥಿತರಿದ್ದು ಮಾತನಾಡಿದರು.

