ಮಂಗಳೂರು : ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯವು ವಿಶ್ವವಿದ್ಯಾಲಯ ಧನಸಹಾಯ ಆಯೋಗದ (ಯುಜಿಸಿ) ಶ್ರೇಣೀಕೃತ ಸ್ವಾಯತ್ತತೆ ನಿಯಮಗಳ ಅಡಿಯಲ್ಲಿ ಪ್ರತಿಷ್ಠಿತ ಕೆಟಗರಿ-1 ಸ್ಥಾನಮಾನವನ್ನು ಪಡೆದು ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ.
ನಗರದ ಪತ್ರಿಕಾಭವನದಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯವನ್ನು ತಿಳಿಸಿದ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ರೆ. ಡಾ. ಪ್ರವೀಣ್ ಮಾರ್ಟಿಸ್ ಎಸ್.ಜೆ., ವಿಶ್ವವಿದ್ಯಾಲಯದ 146 ವರ್ಷಗಳ ಶೈಕ್ಷಣಿಕ ಶ್ರೇಷ್ಠತೆ, ನಾವೀನ್ಯತೆ, ಸಂಶೋಧನೆ ಮತ್ತು ರಾಷ್ಟ್ರ ನಿರ್ಮಾಣದ ಸೇವೆಯನ್ನು ಪರಿಗಣಿಸಿ ಯುಜಿಸಿ ಈ ಗೌರವವನ್ನು ನೀಡಿದೆ ಎಂದು ಹೇಳಿದರು.

ಕಳೆದ ಒಂದೂವರೆ ವರ್ಷಗಳಿಂದ ಈ ಮಾನ್ಯತೆಗಾಗಿ ಅಗತ್ಯ ಪ್ರಕ್ರಿಯೆಗಳು ನಡೆದಿದ್ದು, ವಿಶ್ವವಿದ್ಯಾಲಯದ ಶೈಕ್ಷಣಿಕ ಸಾಧನೆ, ಸಂಶೋಧನಾ ಕಾರ್ಯಕ್ಷಮತೆ ಹಾಗೂ ಆಡಳಿತಾತ್ಮಕ ಗುಣಮಟ್ಟವನ್ನು ಮೌಲ್ಯಮಾಪನ ಮಾಡಿದ ಬಳಿಕ ಯುಜಿಸಿ ಕೆಟಗರಿ-1 ಸ್ಥಾನಮಾನವನ್ನು ಮಂಜೂರು ಮಾಡಿದೆ ಎಂದು ಅವರು ತಿಳಿಸಿದರು.
ಪ್ರಸ್ತುತ ಭಾರತದಲ್ಲಿ 1,292 ವಿಶ್ವವಿದ್ಯಾಲಯಗಳಿದ್ದು, ಅವುಗಳಲ್ಲಿ ಕೇವಲ 157 ಪರಿಗಣಿತ ವಿಶ್ವವಿದ್ಯಾಲಯಗಳಿವೆ. ಈ ಪೈಕಿ ಕೇವಲ 26 ಸಂಸ್ಥೆಗಳು ಮಾತ್ರ ಕೆಟಗರಿ-1 ಸ್ಥಾನಮಾನವನ್ನು ಪಡೆದಿವೆ. ಈ ಮೂಲಕ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯವು ಯುಜಿಸಿಯ ಶ್ರೇಣೀಕೃತ ಸ್ವಾಯತ್ತತೆ ಚೌಕಟ್ಟಿನಡಿ ಅತ್ಯುನ್ನತ ಶೈಕ್ಷಣಿಕ ಗುಣಮಟ್ಟ ಮತ್ತು ಸಾಂಸ್ಥಿಕ ಶ್ರೇಷ್ಠತೆಯನ್ನು ಸಾಧಿಸಿದ ದೇಶದ ಪ್ರಮುಖ ಖಾಸಗಿ ಸಂಸ್ಥೆಗಳ ಸಾಲಿನಲ್ಲಿ ಸ್ಥಾನ ಪಡೆದಿದೆ ಎಂದರು .

ಈ ಮಾನ್ಯತೆ ಪಠ್ಯಕ್ರಮ ವಿನ್ಯಾಸ, ಬೋಧನೆ-ಕಲಿಕಾ ಪ್ರಕ್ರಿಯೆ, ಸಂಶೋಧನಾ ಉತ್ಪಾದಕತೆ, ಆಡಳಿತ ವ್ಯವಸ್ಥೆ, ಮೂಲಸೌಕರ್ಯ, ನಾವೀನ್ಯತೆ, ವಿದ್ಯಾರ್ಥಿ ಬೆಂಬಲ ಸೇವೆಗಳು, ಸಮುದಾಯ ತೊಡಗಿಸಿಕೊಳ್ಳುವಿಕೆ ಹಾಗೂ ಸಾಂಸ್ಥಿಕ ಮೌಲ್ಯಗಳಲ್ಲಿ ವಿಶ್ವವಿದ್ಯಾಲಯ ಸಾಧಿಸಿರುವ ಶ್ರೇಷ್ಠತೆಯನ್ನು ಪ್ರತಿಬಿಂಬಿಸುತ್ತದೆ ಎಂದರು .
ಇದಲ್ಲದೆ, ದೇಶ-ವಿದೇಶಗಳ ಶಿಕ್ಷಣ ಸಂಸ್ಥೆಗಳೊಂದಿಗೆ ಜಂಟಿ ಸಂಶೋಧನಾ ಯೋಜನೆಗಳು, ಸಹಯೋಗದ ಶೈಕ್ಷಣಿಕ ಕಾರ್ಯಕ್ರಮಗಳು, ಅಧ್ಯಾಪಕ ಹಾಗೂ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮಗಳು, ದ್ವಿಪದವಿ ಕೋರ್ಸ್ಗಳು ಸೇರಿದಂತೆ ವಿವಿಧ ಅಕಾಡೆಮಿಕ್ ಸಹಭಾಗಿತ್ವಗಳನ್ನು ಮತ್ತಷ್ಟು ವಿಸ್ತರಿಸಲು ಈ ಸ್ಥಾನಮಾನ ಸಹಕಾರಿಯಾಗಲಿದೆ ಎಂದು ಕುಲಪತಿಗಳು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ರೊನಾಲ್ಡ್ ನಜರೆತ್, ಉಪನ್ಯಾಸಕ ಡಾ.ದಿನೇಶ್ ನಾಯಕ್ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಚಂದ್ರಕಲಾ ನಾಯಕ್ ಉಪಸ್ಥಿತರಿದ್ದರು.

