ಧಾರವಾಡ : ತಾಲೂಕಿನ ಅಮ್ಮಿನಬಾವಿ ಗ್ರಾಮದಲ್ಲಿ ಹಿಂದೂ-ಮುಸ್ಲೀಂ ಬಾಂಧವರಿಂದ ನಡೆಯುತ್ತಿರುವ ಭಾವೈಕ್ಯದ ಮೊರ್ರಂಗೆ ಚಾರಿತ್ರಿಕ ಹಿನ್ನೆಲೆ ಇದ್ದು, ಗುರುವಾರ ಶೃದ್ಧಾ-ಭಕ್ತಿಗಳಿಂದ ಅಂತಿಮ ದಿನದ ಆಚರಣೆಗಳು ನಡೆಯಲಿವೆ.
ಗ್ರಾಮದ ಜುಮ್ಮಾ ಮಸೀದಿಯ ಪಕ್ಕದ ಭವನದಲ್ಲಿ ಗುತ್ತೇಸಾಹೇಬ್ (ಇಮಾಮ್ ಹುಸೇನ್) ಮತ್ತು ಖಾಸೀಂದುಲ್ಹಾ ಎಂದು ಸಂಬೋಧಿಸುವ ಎರಡು ದೇವರುಗಳನ್ನು ಸ್ಥಾಪನೆ ಮಾಡಿದ್ದು, ಭಕ್ತರು ಈ ದೇವರುಗಳಿಗೆ ಬೆಳ್ಳಿಯಿಂದ ಬಹುದೊಡ್ಡ ಪಂಜಾಗಳನ್ನು ಮಾಡಿಸಿಕೊಟ್ಟಿದ್ದಾರೆ. ಗ್ರಾಮದ ದಿಗಂಬರ್ ಜೈನ್ ಸಮಾಜದ ಮುಖಂಡ ದಿವಂಗತ ರಾವಬಹದ್ದೂರ ಪಂಪಾಪತಿ ದೇಸಾಯಿ ಗುತ್ತೇಸಾಬ್ ಪಂಜಾವನ್ನು ಬೆಳ್ಳಿಯಿಂದ ಮಾಡಿಸಿಕೊಟ್ಟಿದ್ದು, ಇದು ಅಮ್ಮಿನಬಾವಿ ಗ್ರಾಮದಲ್ಲಿ ಈ ಹಬ್ಬದ ಭಾವೈಕ್ಯತೆಗೆ ಸಾಕ್ಷಿ ನುಡಿಯುತ್ತದೆ.
ಬಹಳ ಹಿಂದಿನಿಂದಲೂ ನಡೆಯುತ್ತ ಬಂದಿರುವ ಅಗ್ನಿಹಾಯುವ ಪ್ರಕ್ರಿಯೆಯಲ್ಲಿ ಗುರುವಾರ ಡೋಲಿ ಸಮೇತ ಉಭಯ ಪಂಜಾಗಳು ಹಾಯ್ದು ವಿವಿಧ ಜಾನಪದ ವಾದ್ಯ-ಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತವೆ. ಸಂಜೆ ವಿಶೇಷ ಪ್ರಾರ್ಥನೆಯ ನಂತರ ಮತ್ತೆ ಪಂಜಾಗಳ ಮೆರವಣಿಗೆ ನಡೆದು ಹೊಳೆಗೆ ಹೋಗುವ ಕಾರ್ಯಕ್ರಮ ಜರುಗುತ್ತಿದ್ದು, ಈ ಸಂದರ್ಭದಲ್ಲಿ ಸಮೀಪದ ಮರೇವಾಡ ಮತ್ತು ತಿಮ್ಮಾಪೂರ ಗ್ರಾಮಗಳ ಪಂಜಾಗಳೂ ಇಲ್ಲಿ ಪಾಲ್ಗೊಳ್ಳುತ್ತವೆ. ಶಾಂತಿಪೂರ್ಣವಾಗಿ ಪ್ರತೀ ವರ್ಷ ಗ್ರಾಮದ ಹಿಂದೂ-ಮುಸ್ಲೀಂ ಬಾಂಧವರು ಮೊಹರಂ ಆಚರಣೆ ಮಾಡುತ್ತಿರುವುದು ವಿಶೇಷವಾಗಿದೆ.
“ಅನ್ಯಾಯ ಮತ್ತು ದೌರ್ಜನ್ಯದ ವಿರುದ್ಧ ಬಂಡಾಯವೆದ್ದ ಇಮಾಮ್ ಹುಸೇನ್(ಅ.ಸ.) ಅವರು ಸತ್ಯ ಹಾಗೂ ನ್ಯಾಯಕ್ಕಾಗಿ ಹೋರಾಡಿ ಹುತಾತ್ಮರಾದ ಸಂದರ್ಭವೇ ಮೊಹರ್ರಂ ಆಚರಣೆಯಾಗಿದೆ” ಎಂದು ಗ್ರಾಮದ ಜುಮ್ಮಾ ಮಸೀದಿಯ ಇಸ್ಲಾಂ ಧರ್ಮಗುರು ಜಹೀರ್ ಅಬ್ಬಾಸ್ ಖಾದ್ರಿ ತಿಳಿಸಿದರು.


