ಮಂಗಳೂರು : ಆರ್ಥಿಕ ಸಂಕಷ್ಟದಿಂದ ಶಿಕ್ಷಣದಿಂದ ವಂಚಿತರಾಗುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಆಸರೆಯಾಗುವ ಹಾಗೂ ಅವರ ಶೈಕ್ಷಣಿಕ ಕನಸುಗಳನ್ನು ನನಸಾಗಿಸುವ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿರುವ ‘ಎಜುಕಾರುಣ್ಯ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್’ ವತಿಯಿಂದ ದಿ. ಗುರುವಪ್ಪ ಎನ್.ಟಿ. ಬಾಳೆಪುಣಿ ಅವರ ಸ್ಮರಣಾರ್ಥ ದತ್ತಿನಿಧಿ ಪ್ರತಿಭಾ ಪುರಸ್ಕಾರದ ಎರಡನೇ ವರ್ಷದ ಕಾರ್ಯಕ್ರಮವು ಜೂನ್ 26ರಂದು ಬೆಳಿಗ್ಗೆ 11 ಗಂಟೆಗೆ ಮಂಗಳೂರು ಪ್ರೆಸ್ ಕ್ಲಬ್ನಲ್ಲಿ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಮೋಹನ್ದಾಸ್ ಮರಕಡ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಪುತ್ರಿ ಕಾರುಣ್ಯವಾರಿಧಿ ಅವರ ನಾಲ್ಕನೇ ಜನ್ಮದಿನದ ಅಂಗವಾಗಿ ಆರಂಭಿಸಲಾದ ಈ ಯೋಜನೆಯು ಇಂದು 30ಕ್ಕೂ ಅಧಿಕ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಬೆಂಬಲ ನೀಡುತ್ತಿದೆ ಎಂದು ಹೇಳಿದರು.
ಟ್ರಸ್ಟ್ ಕೇವಲ ಬೋಧನಾ ಶುಲ್ಕವಷ್ಟೇ ಅಲ್ಲದೆ, ಸಮವಸ್ತ್ರ, ಪುಸ್ತಕಗಳು ಹಾಗೂ ಕೆಲವು ವಿದ್ಯಾರ್ಥಿಗಳ ಬಸ್ ಶುಲ್ಕವನ್ನು ಭರಿಸುವ ಮೂಲಕ ಸಂಪೂರ್ಣ ಶೈಕ್ಷಣಿಕ ದತ್ತು ಯೋಜನೆಯನ್ನು ಜಾರಿಗೊಳಿಸಿದೆ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ವಾರ್ಷಿಕ ಸುಮಾರು 8 ಲಕ್ಷ ರೂ.ಗಳನ್ನು ವಿನಿಯೋಗಿಸಲಾಗುತ್ತಿದೆ ಎಂದು ತಿಳಿಸಿದರು.
ಈ ಬಾರಿ ಬಾಳೆಪುಣಿ ದತ್ತಿನಿಧಿಯಡಿ ಆರು ಮಂದಿ ಅರ್ಹ ವಿದ್ಯಾರ್ಥಿಗಳಿಗೆ ನೆರವು ನೀಡಲಾಗುತ್ತಿದೆ. ಕಳೆದ ವರ್ಷ ದತ್ತಿನಿಧಿ ಪಡೆದ ಧೃತಿ ಕುಂಜತ್ತಬೈಲ್ ಹಾಗೂ ಮೇಘಾ ಸಜಿಪ ಅವರಿಗೆ ಈ ವರ್ಷವೂ ಪ್ರೋತ್ಸಾಹ ಮುಂದುವರಿಸಲಾಗಿದೆ. ಇದರೊಂದಿಗೆ ತ್ರಿಷಾ ಪಚ್ಚನಾಡಿ, ಶ್ರೀಜಾ ಶೆಟ್ಟಿ, ಶೋಭಿತಾ, ಪ್ರಾಪ್ತಿ, ಶ್ರೇಯಾ ಹಾಗೂ ರಶ್ಮಿತ್ ಅವರಿಗೆ ಒಟ್ಟು 1.50 ಲಕ್ಷ ರೂ. ಮೊತ್ತದ ದತ್ತಿನಿಧಿ ವಿತರಿಸಲಾಗುತ್ತಿದೆ ಎಂದರು.
ಜೂನ್ 26ರಂದು ನಡೆಯುವ ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಉದ್ಘಾಟಿಸಲಿದ್ದಾರೆ. ಉದ್ಯಮಿ ರಾಧಾಕೃಷ್ಣ ಉಮಿಯ ಹಾಗೂ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ವಿಶೇಷ ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದು, ನರಿಂಗಾನ ಕಂಬಳೋತ್ಸವ ಸಮಿತಿಯ ಅಧ್ಯಕ್ಷ ಪ್ರಶಾಂತ್ ಕಾಜವ ದತ್ತಿನಿಧಿಯನ್ನು ಹಸ್ತಾಂತರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿಶಿತ್ ಪೂಜಾರಿ, ಖಾದರ್ ಶಾ, ಪಿ.ಬಿ. ಹರೀಶ್ ರೈ, ಅನ್ನು ಮಂಗಳೂರು ಹಾಗೂ ಪುಷ್ಪರಾಜ್ ಬಿ.ಎನ್. ಸಹಿತ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು .
ಪತ್ರಿಕಾಗೋಷ್ಠಿಯಲ್ಲಿ ಎಜುಕಾರುಣ್ಯ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ರಮೇಶ್ ಶೆಟ್ಟಿ ವಿವೇಕನಗರ, ಟ್ರಸ್ಟಿಗಳಾದ ಪ್ರಶಾಂತ್ ಅಬ್ಬೆಟ್ಟು, ದಿನೇಶ್ ನಾಯ್ಕ , ಬಾಳೇಪುಣಿಯವರ ಆಪ್ತರಾದ ನವೀನ್ ಗಾಂಧಿನಗರ, ವಿದ್ಯಾರ್ಥಿಗಳಾದ ಶ್ರೀಶಾ ಶೆಟ್ಟಿ ಅಬ್ಬೆಟ್ಟು , ಮೇಘಾ ಸಜಿಪ ಉಪಸ್ಥಿತರಿದ್ದರು.


