ಪೂನಾ : ರಿಂಗ್ ರೋಡ್ ಶುಭಾ ಪ್ರಕರಣದ ಬೆನ್ನಲ್ಲೇ ಇದೀಗ ಮಹಾರಾಷ್ಟ್ರದ ಲೋಹಗಢ ಕೋಟೆಯಲ್ಲಿ ಇದೇ ಮಾದರಿಯ ಹತ್ಯೆಯೊಂದು ಬೆಳಕಿಗೆ ಬಂದಿದೆ. ಅದ್ದೂರಿಯಾಗಿ ಮದುವೆಯಾಗಲು ಸಿದ್ಧತೆಗಳು ನಡೆಯುತ್ತಿದ್ದ ವೇಳೆ, ಭಾವಿ ಪತಿಯೊಂದಿಗೆ ಹೊಸ ಜೀವನದ ಕನಸುಗಳನ್ನು ಕಟ್ಟಿಕೊಂಡಿದ್ದಂತೆ ಕಾಣಿಸಿಕೊಂಡ ಯುವತಿಯೊಬ್ಬಳು ತನ್ನ ಪ್ರಿಯಕರನೊಂದಿಗೆ ಸೇರಿ ಆತನನ್ನು ಪ್ರಪಾತಕ್ಕೆ ತಳ್ಳಿ ಹತ್ಯೆ ಮಾಡಿದ್ದ ಪ್ರಕರಣ ಮಹಾರಾಷ್ಟ್ರದಲ್ಲಿ ಭಾರೀ ಸಂಚಲನ ಮೂಡಿಸಿದೆ. ಆರಂಭದಲ್ಲಿ ಇದು ಆಕಸ್ಮಿಕ ಸಾವು ಎಂದು ಭಾವಿಸಲಾಗಿದ್ದರೂ, ತನಿಖೆಯ ವೇಳೆ ಸಿಕ್ಕ ಮಹತ್ವದ ಸುಳಿವು ಪ್ರಕರಣದ ನಿಜ ಸ್ವರೂಪವನ್ನು ಬಯಲಿಗೆ ತಂದಿದೆ.

ಕೇತನ್ ಅಗರ್ವಾಲ್ ಮತ್ತು ಸಿಯಾ ಅವರ ಮದುವೆ ನಿಶ್ಚಯವಾಗಿತ್ತು. ಆದರೆ ಸಿಯಾ ಬೇರೆಯವರನ್ನು ಪ್ರೀತಿಸುತ್ತಿದ್ದಳು. ಆಕೆಯ ಪ್ರಿಯಕರ ಚೇತನ್ ಚೌಧರಿ. ಸಿಯಾ ಸಾಮಾಜಿಕ ಜಾಲತಾಣಗಳಲ್ಲಿ ಕೇತನ್ ಅನ್ನು ಹೊಗಳಿ ಪೋಸ್ಟ್ ಗಳನ್ನು ಹಾಕುತ್ತಿದ್ದರೂ, ತೆರೆಮರೆಯಲ್ಲಿ ಚೇತನ್ ಜೊತೆ ಸೇರಿ ಕೇತನ್ ಕೊಲೆಗೆ ಸಂಚು ರೂಪಿಸಿದ್ದಳು.
ಸಿಯಾ ಕೇತನ್ ಗೆ ಪುಣೆಯ ಲೋಹಗಢ ಕೋಟೆಗೆ ಟ್ರೆಕ್ಕಿಂಗ್ ಹೋಗೋಣ ಎಂದು ಸೂಚಿಸಿದಳು. ಅದೇ ಸಮಯಕ್ಕೆ ತನ್ನ ಪ್ರಿಯಕರ ಚೇತನ್ ಗೆ ತನ್ನ ಲೊಕೇಷನ್ ಅನ್ನು ಶೇರ್ ಮಾಡಿದಳು. ಟ್ರೆಕ್ಕಿಂಗ್ ಸಮಯದಲ್ಲಿ ಸಿಯಾ ಮತ್ತು ಕೇತನ್ ಜೋಡಿಯನ್ನು ಚೇತನ್ ರಹಸ್ಯವಾಗಿ ಹಿಂಬಾಲಿಸುತ್ತಿದ್ದ. ನಿರ್ಜನ ಪ್ರದೇಶಕ್ಕೆ ತಲುಪಿದ ಕೂಡಲೇ ಚೇತನ್ ಮತ್ತು ಸಿಯಾ ಇಬ್ಬರೂ ಸೇರಿ ಕೇತನ್ ಅನ್ನು ಗುಡ್ಡದಿಂದ ಕೆಳಗೆ ತಳ್ಳಿದ್ದಾರೆ. ನಂತರ ಟ್ರೆಕ್ಕಿಂಗ್ ವೇಳೆ ಕಾಲು ಜಾರಿ ಬಿದ್ದು ಕೇತನ್ ಸಾವನ್ನಪ್ಪಿದ್ದಾನೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ.
ಮಹಾರಾಷ್ಟ್ರದ ಪ್ರಮುಖ ಉದ್ಯಮಿಯ ಪುತ್ರ ಕೇತನ್ ಅಗರ್ವಾಲ್ ಮತ್ತು ಸಿಯಾ ಎಂಬ ಯುವತಿಯ ನಿಶ್ಚಿತಾರ್ಥ ಫೆಬ್ರವರಿಯಲ್ಲಿ ನಡೆದಿತ್ತು. ಈ ವರ್ಷದ ನವೆಂಬರ್ನಲ್ಲಿ ಅವರ ಮದುವೆ ಅದ್ದೂರಿಯಾಗಿ ನಡೆಯಬೇಕಿತ್ತು. ಆದರೆ, ಸಿಯಾಗೆ ಈ ಮದುವೆಯ ಬಗ್ಗೆ ಆಸಕ್ತಿ ಇರಲಿಲ್ಲ ಎನ್ನಲಾಗಿದೆ. ಇದೇ ಕಾರಣಕ್ಕೆ ತನ್ನ ಪ್ರಿಯಕರ ಚೇತನ್ ಚೌಧರಿಯೊಂದಿಗೆ ಸೇರಿ ಕೇತನ್ನಿಂದ ಮುಕ್ತಿ ಪಡೆಯಲು ಸಂಚು ರೂಪಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದೆ.

ಜೂನ್ 18ರಂದು ತನ್ನ ಜನ್ಮದಿನದ ಆಚರಣೆಯ ನೆಪದಲ್ಲಿ ಸಿಯಾ, ಕೇತನ್ನನ್ನು ಪುಣೆ ಸಮೀಪದ ಲೋಹಗಡ್ ಕೋಟೆಗೆ ಟ್ರೆಕ್ಕಿಂಗ್ಗೆ ಕರೆದುಕೊಂಡು ಹೋಗಿದ್ದಳು. ಅಲ್ಲಿ ಫೋಟೋ ತೆಗೆಯುವ ವೇಳೆ ಕಾಲು ಜಾರಿ ಕೇತನ್ ಪ್ರಪಾತಕ್ಕೆ ಬಿದ್ದಿದ್ದಾನೆ ಎಂದು ಆಕೆ ಹೇಳಿದ್ದಳು. ಇದನ್ನು ಆಧರಿಸಿ ಪೊಲೀಸರು ಆರಂಭದಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಿಸಿದ್ದರು.
ತನಿಖೆ ಮುಂದುವರಿಸಿದ ಲೋನಾವಾಲಾ ಗ್ರಾಮೀಣ ಪೊಲೀಸ್ ಹಾಗೂ ಸ್ಥಳೀಯ ಅಪರಾಧ ವಿಭಾಗದ ಅಧಿಕಾರಿಗಳು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ. ಕೇತನ್ ಮತ್ತು ಸಿಯಾ ಒಟ್ಟಿಗೆ ಕೋಟೆಯೊಳಗೆ ಸಾಗುತ್ತಿರುವ ದೃಶ್ಯಗಳಲ್ಲಿ, ಅವರ ಹಿಂದೆ ಕೆಲವೇ ಮೀಟರ್ಗಳ ಅಂತರದಲ್ಲಿ ಮತ್ತೊಬ್ಬ ವ್ಯಕ್ತಿ ನಡೆದುಕೊಂಡು ಬರುತ್ತಿರುವುದು ಕಂಡುಬಂದಿದೆ. ಆತನ ಮುಖವನ್ನು ಸಂಪೂರ್ಣವಾಗಿ ಮುಚ್ಚುವಂತೆ ಹುಡ್ಡಿ ಹಾಕಿಕೊಂಡಿದ್ದ ಆತ, ಹೆಡ್ಫೋನ್ ಧರಿಸಿದ್ದನು. ಅವನ ನಡೆ-ನುಡಿಗಳು ಪೊಲೀಸರಲ್ಲಿ ಅನುಮಾನ ಹುಟ್ಟಿಸಿವೆ

ಪೊಲೀಸರ ಗಮನ ಸೆಳೆದ ಮತ್ತೊಂದು ಅಂಶವೆಂದರೆ, ಘಟನೆ ನಡೆದ ದಿನ ಪುಣೆಯಲ್ಲಿ ಸುಮಾರು 33 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇಂತಹ ಬಿಸಿಲಿನಲ್ಲೂ ಆ ವ್ಯಕ್ತಿ ದಪ್ಪವಾದ ಹುಡ್ಡಿ ಧರಿಸಿದ್ದದ್ದು ಅಸಹಜವಾಗಿ ಕಂಡಿತ್ತು. ಇನ್ನೊಂದು ದೃಶ್ಯದಲ್ಲಿ ಸಿಯಾ ಹಿಂದಕ್ಕೆ ತಿರುಗಿ ನೋಡುವಾಗ, ಆ ವ್ಯಕ್ತಿ ತಕ್ಷಣವೇ ತಲೆ ತಗ್ಗಿಸಿಕೊಂಡಿರುವುದು ಕೂಡ ತನಿಖಾಧಿಕಾರಿಗಳ ಅನುಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿತು.
ತನಿಖೆ ವೇಳೆ ಇಬ್ಬರೂ ಮಾಡಿದ ಕೆಲವು ತಪ್ಪುಗಳಿಂದಲೇ ಪ್ರಕರಣಕ್ಕೆ ಸಂಬಂಧಿಸಿದ ಮಹತ್ವದ ಸಾಕ್ಷ್ಯಗಳು ಪೊಲೀಸರ ಕೈಗೆ ಸಿಕ್ಕಿವೆ ಎಂದು ತಿಳಿದುಬಂದಿದೆ. ಈ ಸಾಕ್ಷ್ಯಗಳ ಆಧಾರದಲ್ಲಿ ಪೊಲೀಸರು ಇಬ್ಬರನ್ನೂ ಬಂಧಿಸಿದ್ದು, ಈಗ ಕಸ್ಟಡಿಗೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

ಆರೋಪಿ ಹೇಗೆ ಸಿಕ್ಕಿಬಿದ್ದ?
ಸಿಯಾ ತನ್ನ ಪ್ರಿಯಕರ ಚೇತನ್ ಗೆ ತನ್ನ ಲೊಕೇಷನ್ ಅನ್ನು ಶೇರ್ ಮಾಡಿರುವುದು ಹಾಗೂ ಘಟನೆಯ ಬಳಿಕ ಸಿಸಿಟಿವಿ ದೃಶ್ಯಾವಳಿಗಳು ಆರೋಪಿಗಳನ್ನು ಬಲೆಗೆ ಬೀಳಿಸಿವೆ.
ಬಿಸಿಲಿನ ತಾಪಮಾನವು ೩೩ ಡಿಗ್ರಿ ಸೆಲ್ಶಿಯಸ್ ಇದ್ದರೂ ಸಹ ಚೇತನ್ ಸಂಪೂರ್ಣವಾಗಿ ಹೂಡಿ ಧರಿಸಿದ್ದ. ಇದು ಪೊಲೀಸರಲ್ಲಿ ಮೊದಲ ಅನುಮಾನ ಮೂಡಿಸಿತು.
ಬಿಸಿ ಗಾಳಿಯ ನಡುವೆಯೂ ಹೂಡಿ ಧರಿಸಿದ್ದ ವ್ಯಕ್ತಿಯ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದರು.
ಪೊಲೀಸರು ಚೇತನ್ ಅನ್ನು ಹಿಂಬಾಲಿಸುತ್ತಿರುವಾಗ ಅವನು ಬಳಸಿದ ಹೆಡ್ಫೋನ್ ಮತ್ತು ಮೊಬೈಲ್ ಲೊಕೇಷನ್ ಪತ್ತೆಯಾಯಿತು.
ಈ ಮೂಲಕ ಚೇತನ್ ಮತ್ತು ಸಿಯಾ ನಡುವಿನ ಸಂಪರ್ಕ ಪೊಲೀಸರಿಗೆ ಸಿಕ್ಕಿತು. ಸಿಯಾ ತನ್ನ ಪ್ರಿಯಕರ ಚೇತನ್ ಗೆ ತನ್ನ ಲೊಕೇಷನ್ ಅನ್ನು ಶೇರ್ ಮಾಡಿರುವುದು ಹಾಗೂ ಘಟನೆಯ ಬಳಿಕ ಸಿಸಿಟಿವಿ ದೃಶ್ಯಾವಳಿಗಳು ಆರೋಪಿಗಳನ್ನು ಬಲೆಗೆ ಬೀಳಿಸಿವೆ.

ಪಾಸ್ಪೋರ್ಟ್ ಕಾಣೆಯಾಗಿ ರದ್ದಾದ ಬಾಲಿ ಪ್ರವಾಸ
ಇವರಿಬ್ಬರು ಮದುವೆಗೂ ಮುನ್ನ ಬಾಲಿಗೆ ಪ್ರೀ-ವೆಡ್ಡಿಂಗ್ ಫೋಟೋಶೂಟ್ಗೆ ತೆರಳಲು ಯೋಜನೆ ಹಾಕಿಕೊಂಡಿದ್ದರು. ಆದರೆ, ಪ್ರಯಾಣಕ್ಕೆ ಕೆಲ ದಿನಗಳ ಮೊದಲು ಕೇತನ್ನ ಪಾಸ್ಪೋರ್ಟ್ ಕಾಣೆಯಾಗಿದ್ದರಿಂದ ಆ ಯೋಜನೆ ರದ್ದಾಗಿತ್ತು. ಈ ಘಟನೆಯನ್ನೂ ಪೊಲೀಸರು ತನಿಖೆಯ ಭಾಗವನ್ನಾಗಿ ಪರಿಗಣಿಸಿದ್ದಾರೆ.


