ಧಾರವಾಡ : ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳಿಕೆಯ ಹಂಬಲದಿಂದ ವಿಷಯಗಳ ಆಳವಾದ ಜ್ಞಾನ ಸಂಪಾದನೆಗೆ ತೆರೆದುಕೊಳ್ಳದೇ ನಡೆಸುವ ಕೇವಲ ಅಂಕ ಪ್ರಣೀತ ಅಧ್ಯಯನ ವ್ಯರ್ಥಗೊಳ್ಳುತ್ತದೆ ಎಂದು ಹಿರಿಯ ಶಿಕ್ಷಣ ಚಿಂತಕ ಸುರೇಶ ಕುಲಕರ್ಣಿ ಪ್ರತಿಪಾದಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು (ಕಸಾಪ) ಜಿಲ್ಲಾ ಮತ್ತು ತಾಲೂಕು ಘಟಕಗಳ 5 ದತ್ತಿ ಕಾರ್ಯಕ್ರಮಗಳ ಅಂಗವಾಗಿ ತಾಲೂಕಿನ ಅಮ್ಮಿನಬಾವಿಯ ಶ್ರೀಶಾಂತೇಶ್ವರ ಪ್ರೌಢ ಶಾಲೆಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದತ್ತಿ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.

ನಿರ್ದಿಷ್ಟ ಚರ್ಚೆಯೊಂದಿಗೆ ಪಠ್ಯಪೂರಕ ಪ್ರಶ್ನೆಗಳಿಗೆ ನಿಖರ ಉತ್ತರಗಳನ್ನು ಕಂಡುಕೊಂಡಾಗ ವ್ಯಾಸಂಗದ ವಿಷಯಗಳು ನೆನಪಿನಾಳದಲ್ಲಿ ಶಾಶ್ವತವಾಗಿ ಉಳಿಯಲು ಸಾಧ್ಯವಾಗುತ್ತದೆ. ಮಾನವನ ಮೆದುಳು ಹೊಂದಿರುವ 1 ಸಾವಿರ ಕೋಟಿ ನರವ್ಯೂಹಗಳು 400 ಕಿ.ಮೀ. ವೇಗದಲ್ಲಿ ಕಾರ್ಯಮಾಡುತ್ತಿದ್ದು, ಧನಾತ್ಮಕ ಚಿಂತನೆ, ಅನ್ವೇಷಣೆ, ಅರ್ಥಪೂರ್ಣ ಓದು, ವಿಷಯದ ಆಸ್ವಾದನೆ ಅಧಿಕವಾದಷ್ಟೂ ಜ್ಞಾನಸಂಪಾದನೆ ವ್ಯಾಪಕಗೊಳ್ಳುತ್ತದೆ ಎಂದೂ ಸುರೇಶ ಕುಲಕರ್ಣಿ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಮಾತನಾಡಿ, ವಿದ್ಯಾರ್ಥಿಗಳು ಯಾವುದೇ ಋಣಾತ್ಮಕ ಭಾವನೆಗಳ ಹವ್ಯಾಸಗಳತ್ತ ಇಣಿಕಿಹಾಕದೇ ಮೌಲ್ಯಾಧಾರಿತ ಬದುಕನ್ನು ರೂಢಿಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಹವ್ಯಾಸೀ ಪತ್ರಕರ್ತ ಗುರುಮೂರ್ತಿ ಯರಗಂಬಳಿಮಠ ಮಾತನಾಡಿ, ವಿದ್ಯಾರ್ಥಿಗಳು ಪುಸ್ತಕ ಪ್ರೀತಿಯನ್ನು ಬೆಳೆಸಿಕೊಂಡು ನಿರಂತರ ಹೊಸ ಓದಿನೊಂದಿಗೆ ಸಂಪಾದಿಸುವ ಜ್ಞಾನದ ನೆಲೆಯಲ್ಲಿ ಭಾರತ ಬಯಸುವ ಉತ್ಕೃಷ್ಟ ಮಾನವ ಸಂಪನ್ಮೂಲವಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದರು.
ಇನ್ನೋರ್ವ ಅತಿಥಿ ಶಿಕ್ಷಕ ಮುಖಂಡ ಗುರು ತಿಗಡಿ ಮಾತನಾಡಿ, ನಮ್ಮ ಗ್ರಾಮೀಣ ಪ್ರತಿಭೆಗಳು ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉನ್ನತ ಸ್ಥಾನಗಳನ್ನು ಪಡೆಯುವಂತಹ ವಿಶೇಷ ಜ್ಞಾನ ಸಂಪಾದನೆಗೆ ತೊಡಗಿಕೊಳ್ಳಬೇಕು ಎಂದರು.

ಪ್ರೌಢ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಸುನೀಲ ಗುಡಿ ಮಾತನಾಡಿ, ವಿದ್ಯಾರ್ಥಿಗಳು ಎಲ್ಲಾ ವಿಷಯಗಳನ್ನು ಕಷ್ಟ ಪಟ್ಟು ಕಲಿಯದೇ ಇಷ್ಟಪಟ್ಟು ಕಲಿಯಲು ರೂಢಿಸಿಕೊಂಡಾಗ ಮೇಧಾವಿ ಜಾಣ್ಮೆ ಬೆಳೆದು ಪ್ರಶಂಸೆಗೆ ಪಾತ್ರರಾಗುತ್ತಾರೆ ಎಂದರು.
ಪ್ರೌಢ ಶಾಲೆಯ ಮುಖ್ಯಾಧ್ಯಾಪಕ ಎನ್.ಬಿ.ಅಮರಗೋಳ ಅಧ್ಯಕ್ಷತೆವಹಿಸಿದ್ದರು. ಕ.ಸಾ.ಪ. ಜಿಲ್ಲಾ ಕಾರ್ಯದರ್ಶಿ ಡಾ.ಜಿನದತ್ತ ಹಡಗಲಿ ಮತ್ತು ಕ.ಸಾ.ಪ. ತಾಲೂಕಾಧ್ಯಕ್ಷ ಮಹಾಂತೇಶ ನರೇಗಲ್ಲ ಮಾತನಾಡಿದರು. ಕಲಾವಿದೆ ಪ್ರಮಿಳಾ ಜಕ್ಕಣ್ಣವರ ಕನ್ನಡ ಗೀತಗಾಯನ ಪ್ರಸ್ತುತಪಡಿಸಿದರು. ಶಿಕ್ಷಕ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಿತಕುಮಾರ ದೇಸಾಯಿ, ಎಂ.ಜಿ.ಸುಬೇದಾರ, ಉಮಾ ಬಾಗಲಕೋಟ ಇದ್ದರು. ಶಿಕ್ಷಕಿ ಲಲಿತಾ ವೈ.ಎಂ. ನಿರೂಪಿಸಿದರು. ಜಿ.ಎಫ್. ಶಿವಬಸನಗೌಡ್ರ ವಂದಿಸಿದರು.
ಪುರಸ್ಕಾರ ಪ್ರದಾನ : ಎಸ್. ಎಸ್.ವಿದ್ವಾನ್ ಮತ್ತು ಎಸ್.ಗುರುಕುಮಾರ ದತ್ತಿ, ಮಲ್ಲಮ್ಮ ಮೂಲಿಮನಿ ದತ್ತಿ, ದಿ. ಕಾಮಾಕ್ಷಮ್ಮ ಚೆನ್ನವೀರಸ್ವಾಮಿ ಚಿಕ್ಕಮಠ ದತ್ತಿ, ದಿ. ವೇದಮೂರ್ತಿ ಚೆನ್ನವೀರಸ್ವಾಮಿ ಚಿಕ್ಕಮಠ ದತ್ತಿ, ದಿ. ಶಾಂತಾ ಚೆನ್ನಬಸಪ್ಪ ಸುಣಧೋಳಿ ದತ್ತಿ ಅಂಗವಾಗಿ ವಿದ್ಯಾರ್ಥಿನಿಯರಾದ ವಿನೋದಾ ಕಂಬಳಿ, ಅಕ್ಷತಾ ರುದ್ರಪ್ಪನವರ ಹಾಗೂ ಲಕ್ಷ್ಮಿ ಕರಡಿಗುಡ್ಡ ಅವರಿಗೆ ಕ.ಸಾ.ಪ.ದಿಂದ ಪ್ರತಿಭಾ ಪುರಸ್ಕಾರ ಪ್ರದಾನ ಮಾಡಲಾಯಿತು.

