ಸಜಂಕಿಲ: ವ್ಯಕ್ತಿಗಳು ಮತ್ತು ವೈಯಕ್ತಿಕ ಹಿತಾಸಕ್ತಿಗಳಿಗಿಂತ ಹೆಚ್ಚಾಗಿ ದೇಶ, ಸಂಘಟನೆ ಮತ್ತು ಸಿದ್ಧಾಂತಕ್ಕೆ ಪ್ರಾಮುಖ್ಯತೆ ಹಾಗೂ ಆದ್ಯತೆ ನೀಡಿದ ಕಾರಣಕ್ಕಾಗಿ, ಯಾವುದೇ ಸೀಳಿಲ್ಲದೆ ವಿಭಜನೆಯಾಗದೆ ಬೆಳೆದ ಇತಿಹಾಸ ಬಿಜೆಪಿಯದ್ದಾಗಿದೆ ಎಂದು ಬಿಜೆಪಿಯ ರಾಜ್ಯ ಕಾರ್ಯದರ್ಶಿ ಕೆ. ರಂಜಿತ್ ತಿಳಿಸಿದರು.
ಮಂಜೇಶ್ವರ ಮಂಡಲದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾ ಅಭಿಯಾನವನ್ನು (ಅಧ್ಯಯನ ಶಿಬಿರ) ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಕಾಂಗ್ರೆಸ್, ಜನತಾದಳ, ಕಮ್ಯುನಿಸ್ಟ್ ಪಕ್ಷ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಹಲವು ಬಾರಿ ವಿಭಜನೆಯನ್ನು ಕಂಡಾಗ ಅಥವಾ ಹಲವು ಬಣಗಳಾಗಿ ರೂಪಾಂತರಗೊಂಡಾಗ, ಕಳೆದ ನಾಲ್ಕೂವರೆ ದಶಕಗಳಿಂದ ದಿನೇ ದಿನೇ ಬೆಳೆದು 14 ಕೋಟಿ ಸದಸ್ಯರನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಸೋಲುಗಳನ್ನು ಯಶಸ್ಸಿನ ಮೆಟ್ಟಿಲುಗಳನ್ನಾಗಿ ಮಾಡಿದ ಇತಿಹಾಸ ಬಿಜೆಪಿಯದ್ದಾಗಿದೆ. ಪಕ್ಷದ ಇತಿಹಾಸ, ಕಾರ್ಯ ಯೋಜನೆ ಮತ್ತು ಉದ್ದೇಶಗಳನ್ನು ಪಕ್ಷದ ಕಾರ್ಯಕರ್ತರಿಗೆ ಸರಿಯಾಗಿ ತಲುಪಿಸಲು ಪ್ರತಿ ಮೂರು ವರ್ಷಗಳಿಗೊಮ್ಮೆ ಬಿಜೆಪಿ ಪ್ರಶಿಕ್ಷಣ ಶಿಬಿರಗಳನ್ನು ಆಯೋಜಿಸುತ್ತದೆ ಎಂದು ಅವರು ಹೇಳಿದರು.

ಬಿಜೆಪಿ ಮಂಜೇಶ್ವರ ಮಂಡಲದ ಅಧ್ಯಕ್ಷರಾದ ಆದರ್ಶ್ ಬಿ.ಎಂ. ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಎಂ.ಎಲ್. ಅಶ್ವಿನಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ಆರ್. ಸುನಿಲ್, ಜಿಲ್ಲಾ ಉಪಾಧ್ಯಕ್ಷರಾದ ಮಣಿಕಂಠರೈ , ಮುರಳೀಧರ್ ಯಾದವ್, ಜಿಲ್ಲಾ ಕಾರ್ಯದರ್ಶಿಗಳಾದ ಎನ್. ಮಧು, ಲೋಕೇಶ್ ನೋಂಡ, ಜಿಲ್ಲಾ ಸೆಲ್ ಕೋ-ಆರ್ಡಿನೇಟರ್ ಸುಕುಮಾರ್ ಕುದ್ರೆಪ್ಪಾಡಿ, ಎಸ್.ಸಿ. ಮೋರ್ಚಾ ರಾಜ್ಯ ಕಾರ್ಯದರ್ಶಿ ಎ.ಕೆ. ಕಯ್ಯಾರ್, ಒಬಿಸಿ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದಯಾನಂದ, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಯತಿರಾಜ್ ಮತ್ತು ಕೆ.ವಿ. ರಾಧಾಕೃಷ್ಣ ಭಟ್ ಮಾತನಾಡಿದರು.ಭಾನುವಾರ ಸಂಜೆ ಶಿಬಿರವು ಸಮಾರೋಪಗೊಳ್ಳಲಿದೆ.

