ಬೆಂಗಳೂರು: ಮದುವೆಗೆ ನಿರಾಕರಿಸಿದ್ದಕ್ಕೆ ಪ್ರೇಯಸಿಯನ್ನು ತನ್ನ ಪ್ರಿಯಕರನೇ ಚಾಕುವಿನಿಂದ ಕುತ್ತಿಗೆಗೆ ಇರಿದು ಕೊಲೆ ಮಾಡಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ನಲ್ಲಿ ನಡೆದಿದೆ. ಕೊಲೆಯಾದ ಯುವತಿಯನ್ನು ಅಂಜಲಿ (23) ಎಂದು ಗುರುತಿಸಲಾಗಿದ್ದು, ಆರೋಪಿ ಪ್ರಿಯಕರ ರಾಜೀವ್ ಆಗಿದ್ದಾನೆ.

ಮೂರ್ನಾಲ್ಕು ವರ್ಷಗಳಿಂದ ಇವರಿಬ್ಬರು ಪ್ರೀತಿಸುತ್ತಿದ್ದರು. ಇಬ್ಬರೂ ಒಂದೇ ಕಡೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಪರಿಚಯವಾಗಿ, ಕ್ರಮೇಣ ಇಬ್ಬರೂ ಪ್ರೀತಿಸಲಾರಂಭಿಸಿದ್ದರು. ಅಂಜಲಿ ಮತ್ತು ರಾಜೀವ್ ಇಬ್ಬರ ಕುಟುಂಬಗಳಿಗೂ ಈ ಪ್ರೀತಿಯ ಬಗ್ಗೆ ತಿಳಿದಿತ್ತು.ರಾಜೀವ್ಗೆ ಕ್ರಿಮಿನಲ್ ಹಿನ್ನಲೆಇತ್ತು. ಇದೇ ಕಾರಣದಿಂದ ಅಂಜಲಿಯ ಕುಟುಂಬಸ್ಥರು ಅವರ ಮದುವೆಗೆ ಒಪ್ಪಿರಲಿಲ್ಲ. ಅಂಜಲಿ ಕೂಡ ತನ್ನ ಕುಟುಂಬದವರ ಒತ್ತಾಯಕ್ಕೆ ಮಣಿದು, ರಾಜೀವ್ನಿಂದ ದೂರವಿರಲು ಪ್ರಯತ್ನಿಸುತ್ತಿದ್ದಳು. ಇದರಿಂದಾಗಿ ರಾಜೀವ್ ಮಾನಸಿಕವಾಗಿ ಕುಸಿದಿದ್ದನು ಮತ್ತು ಅಂಜಲಿಯನ್ನು ಮದುವೆಯಾಗಲು ಪದೇ ಪದೇ ಒತ್ತಾಯಿಸುತ್ತಿದ್ದನು.
ಭಾನುವಾರ ಸಂಜೆ ಸುಮಾರು 9.30 ರ ಸುಮಾರಿಗೆ, ರಾಜೀವ್ ಅಂಜಲಿಯನ್ನು ಊಟಕ್ಕಾಗಿ ಪೈಪ್ ಲೈನ್ ರಸ್ತೆಗೆ ಕರೆತಂದಿದ್ದ. ಈ ಸಂದರ್ಭದಲ್ಲಿ ಅವರು ಮತ್ತೆ ಮದುವೆಯ ಬಗ್ಗೆ ಮಾತುಕತೆ ಆರಂಭಿಸಿದರು. ಆದರೆ ಅಂಜಲಿ ಮದುವೆಗೆ ತಿರಸ್ಕರಿಸಿದ್ದು, ನಂತರ ಇಬ್ಬರ ನಡುವೆ ಗಲಾಟೆಯಾಗಿದೆ. ಕೋಪದಲ್ಲಿ ರಾಜೀವ್, ಅಂಜಲಿಯ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ತಕ್ಷಣವೇ ಸ್ಥಳೀಯರು ಅಂಜಲಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಂಜಲಿ ಸಾವನ್ನಪ್ಪಿದ್ದಾಳೆ.

ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಮಹಾಲಕ್ಷ್ಮಿ ಲೇಔಟ್ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಕೆಲವೇ ನಿಮಿಷಗಳಲ್ಲಿ ಆರೋಪಿ ರಾಜೀವ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೊಲೆಯಾದ ಅಂಜಲಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಎಂ.ಎಸ್. ರಾಮಯ್ಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

