ಬೆಂಗಳೂರು : ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ರಾಜ್ಯಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026 ಕಾರ್ಯವು ಜೂನ್ 30ರಿಂದ ಅಧಿಕೃತವಾಗಿ ಆರಂಭವಾಗಿದೆ. ಜುಲೈ 29ರವರೆಗೆ ಒಂದು ತಿಂಗಳ ಕಾಲ ಬೂತ್ ಮಟ್ಟದ ಅಧಿಕಾರಿಗಳು (BLO) ನಿಮ್ಮ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ. ಈ ಪ್ರಕ್ರಿಯೆಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಹವಾಲುಗಳ ನಿವಾರಣೆ, ದೂರು ಸಲ್ಲಿಕೆ ಹಾಗೂ ಸ್ಪಷ್ಟೀಕರಣಕ್ಕಾಗಿ ಬೆಂಗಳೂರು ನಗರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಶೇಷ ಸಹಾಯವಾಣಿ ಕೇಂದ್ರವನ್ನು ಸ್ಥಾಪಿಸಲಾಗಿದೆ ಎಂದು ಅಪರ ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಕಾಂತರಾಜು ಪಿ.ಎಸ್. ತಿಳಿಸಿದ್ದಾರೆ.
ನಿಮ್ಮ ವೋಟರ್ ಐಡಿಯಲ್ಲಿ ಹೆಸರು, ವಿಳಾಸ ತಪ್ಪುಗಳಿದ್ದರೆ ಸೂಕ್ತ ತಿದ್ದುಪಡಿ ಮಾಡಲು, 18 ವರ್ಷ ತುಂಬಿದ ಹೊಸ ಮತದಾರರ ಹೆಸರು ಸೇರಿಸಲು ಹಾಗೂ ವಲಸೆ ಹೋದವರು ಅಥವಾ ಮೃತಪಟ್ಟವರ ಹೆಸರುಗಳನ್ನು ಪಟ್ಟಿಯಿಂದ ಕೈಬಿಡಲು ಬಿಎಲ್ಒಗಳು ಮನೆಗೆ ಬಂದಾಗ ಎಸ್ಐಆರ್ (SIR) ಅರ್ಜಿಯನ್ನು ನೀಡಲಿದ್ದಾರೆ. ಸಾರ್ವಜನಿಕರು ಈ ಅರ್ಜಿಯನ್ನು ಸರಿಯಾಗಿ ಭರ್ತಿ ಮಾಡಿ, ಸಹಿ ಹಾಕಿ, ಅಗತ್ಯ ದಾಖಲೆಗಳಾದ ಕುಟುಂಬ ಸದಸ್ಯರ ಗುರುತಿನ ಚೀಟಿ, ವೋಟರ್ ಐಡಿ, ಆಧಾರ್ ಕಾರ್ಡ್, ವಾಸಸ್ಥಳ ದೃಢೀಕರಣ ಪತ್ರ ಹಾಗೂ ಪಾಸ್ಪೋರ್ಟ್ ಅಳತೆಯ ಭಾವಚಿತ್ರವನ್ನು ಸ್ಥಳದಲ್ಲೇ ಅಧಿಕಾರಿಗಳಿಗೆ ನೀಡಬೇಕು. ಒಂದಕ್ಕಿಂತ ಹೆಚ್ಚು ಕಡೆ ನೋಂದಣಿಯಾಗಿದ್ದರೆ ಅಥವಾ ವಂಶಾವಳಿ ಜೋಡಣೆಯಾಗದಿದ್ದರೆ ಅಂತಹ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗುತ್ತದೆ, ಮತದಾನದ ಹಕ್ಕನ್ನು ಚಲಾಯಿಸಲು ಮತದಾರರ ಪಟ್ಟಿಯಲ್ಲಿ ಹೆಸರಿರುವುದು ಕಡ್ಡಾಯವಾಗಿರುವುದರಿಂದ, ಸಾರ್ವಜನಿಕರು ತಮ್ಮ ಮನೆಗೆ ಬರುವ ಅಧಿಕಾರಿಗಳಿಗೆ ಸೂಕ್ತ ಮಾಹಿತಿ ನೀಡಿ ಸಹಕರಿಸಬೇಕೆಂದು ಚುನಾವಣಾ ಆಯೋಗ ಕೋರಿದೆ.

