ಬೆಳಗಾವಿ : ವಿವಾಹಿತ ಮಹಿಳೆಯೊಂದಿಗೆ ಯುವಕನೊಬ್ಬ ಪರಾರಿಯಾದ ಘಟನೆಯಿಂದ ಆಕ್ರೋಶಗೊಂಡ ಮಹಿಳೆಯ ಸಂಬಂಧಿಕರು ಯುವಕನ ಮನೆಯ ಮೇಲೆ ದಾಳಿ ನಡೆಸಿ, ಸಂಪೂರ್ಣ ಧ್ವಂಸಗೊಳಿಸಿರುವ ಘಟನೆ ಬೆಳಗಾವಿ ತಾಲೂಕಿನ ಭರಮ್ಯಾನಟ್ಟಿ ಗ್ರಾಮದಲ್ಲಿ ನಡೆದಿದೆ. ಈ ಹಿನ್ನೆಲೆ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಸಂತ್ರಸ್ತ ಕುಟುಂಬವು ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ.
ಕಳೆದ ಎರಡು ದಿನಗಳ ಹಿಂದೆ ಗ್ರಾಮದ ನಾಗವ್ವ ಎಂಬ ವಿವಾಹಿತ ಮಹಿಳೆಯೊಂದಿಗೆ ಯಲ್ಲಪ್ಪ ನಾಯಕ ಎಂಬ ಯುವಕ ಪರಾರಿಯಾಗಿರುವುದಾಗಿ ತಿಳಿದುಬಂದಿದೆ. ನಾಗವ್ವ ಕಳೆದ ವರ್ಷ ಬಸಪ್ಪ ನಾಯಕ ಎಂಬಾತನನ್ನು ವಿವಾಹವಾಗಿದ್ದಳು.. ಬಸಪ್ಪ ನಾಯಕ ಮತ್ತು ಯಲ್ಲಪ್ಪ ನಾಯಕ ಆತ್ಮೀಯ ಸ್ನೇಹಿತರಾಗಿದ್ದು, ಮೂವರೂ ಕಂಪನಿಯೊಂದರಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ತನ್ನ ಆತ್ಮೀಯ ಸ್ನೇಹಿತನೇ ತನ್ನ ಪತ್ನಿಯನ್ನು ಕರೆದುಕೊಂಡು ಹೋದ ಬಗ್ಗೆ ಬಸಪ್ಪ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾನೆ.

ಈ ಘಟನೆಯಿಂದ ಆಕ್ರೋಶಗೊಂಡ ನಾಗವ್ವ ಅವರ ಪೋಷಕರು, ಪತಿ ಬಸಪ್ಪ ನಾಯಕನ ಕುಟುಂಬಸ್ಥರು ಮತ್ತು ಸಂಬಂಧಿಕರು ಸೇರಿದಂತೆ ದೊಡ್ಡ ಗುಂಪೊಂದು ಮಾರಕಾಸ್ತ್ರಗಳೊಂದಿಗೆ ಯಲ್ಲಪ್ಪನ ಮನೆಯ ಮೇಲೆ ದಾಳಿ ಮಾಡಿದ್ದಾರೆ. ಮನೆಯ ಹಂಚುಗಳನ್ನು ಒಡೆದುಹಾಕಲಾಗಿದ್ದು, ಟಿವಿ ಸೇರಿದಂತೆ ಎಲ್ಲಾ ಗೃಹೋಪಯೋಗಿ ವಸ್ತುಗಳನ್ನು ಪುಡಿ ಪುಡಿ ಮಾಡಲಾಗಿದೆ. ಇಡೀ ಮನೆ ಅವಶೇಷದ ರಾಶಿಯಾಗಿ ಮಾರ್ಪಟ್ಟಿದೆ. ದಾಳಿ ವೇಳೆ ಮನೆಯಲ್ಲಿದ್ದ ಯಲ್ಲಪ್ಪನ ಪೋಷಕರು ಜೀವಭಯದಿಂದ ಪರಾರಿಯಾಗಿದ್ದು, ದೊಡ್ಡ ಅಪಾಯದಿಂದ ಪಾರಾಗಿದ್ದಾರೆ.
ದಾಳಿಯ ಸಮಯದಲ್ಲಿ ಕೇವಲ ಮನೆ ಧ್ವಂಸ ಮಾಡಿದ್ದು ಮಾತ್ರವಲ್ಲದೇ, ದುಷ್ಕರ್ಮಿಗಳು ಮನೆಯಲ್ಲಿದ್ದ ಚಿನ್ನಾಭರಣಗಳು, ನಗದು ಹಣ ಮತ್ತು 25 ಕುರಿಗಳನ್ನು ದೋಚಿಕೊಂಡು ಪರಾರಿಯಾಗಿರುವುದಾಗಿ ಸಂತ್ರಸ್ತ ಕುಟುಂಬ ದೂರಿನಲ್ಲಿ ಆರೋಪಿಸಿದೆ. ತಮ್ಮ ಆಸ್ತಿಯನ್ನು ಲೂಟಿ ಮಾಡಿಕೊಂಡು ಹೋಗಿರುವುದರಿಂದ ತಾವು ನಿರ್ಗತಿಕರಾಗಿರುವುದಾಗಿ ಅವರು ಅಳಲು ತೋಡಿಕೊಂಡಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸಂತ್ರಸ್ತ ಕುಟುಂಬವು ಬೆಳಗಾವಿ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಯನ್ನು ಆರಂಭಿಸಿದ್ದು, ದಾಳಿಯಲ್ಲಿ ಭಾಗವಹಿಸಿದ ಆರೋಪಿಗಳನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

