ಮಂಗಳೂರು : ದ.ಕ ಜಿಲ್ಲೆಯಾದ್ಯಂತ ಮಂಗಳವಾರ ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಂಗಳೂರು ನಗರದ ಕಂಕನಾಡಿ ಸಮೀಪದ ನಾಗೂರಿ ಎಂಬಲ್ಲಿ ಭೀಕರ ದುರಂತ ಸಂಭವಿಸಿದೆ. ರಾತ್ರಿಯಿಂದ ಸುರಿಯುತ್ತಿರುವ ಭಾರೀ ಮಳೆಯಿಂದ ತಡೆಗೋಡೆ ಕುಸಿದು ಹಳೆಯ ಹಂಚಿನ ಮನೆಯ ಮೇಲ್ಛಾವಣಿಗೆ ಬಿದ್ದ ಪರಿಣಾಮ ನಿದ್ರೆ ಮಂಪರಿನಲ್ಲಿದ್ದ ಓರ್ವ ಮಹಿಳೆ ಇಬ್ಬರು ಮಕ್ಕಳು ಸೇರಿದಂತೆ ಮೂವರು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ, ಮೃತ ಪಟ್ಟವರನ್ನು ಅನಾಮಿಕ ಚೌರಾಸಿ (:8 ವರ್ಷ) ,ಪರಿ (4ವರ್ಷ), ಹಾಗೂ ಶಾಂತ (46 ವರ್ಷ) ಎಂದು ಗುರುತಿಸಲಾಗಿದೆ.

ಘಟನೆಯ ನಡೆದ ತಕ್ಷಣ ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಮೇಲ್ಚಾವಣಿಯ ಅವಶೇಷಗಳ ಅಡಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಒಬ್ಬ ಪುರುಷ ಹಾಗೂ ಇಬ್ಬರು ಬಾಲಕಿಯರನ್ನು ಪ್ರಾಣಾಪಾಯದಿಂದ ರಕ್ಷಿಸಲಾಗಿದೆ. ಮೂಲತಃ ಬಿಹಾರ ರಾಜ್ಯದವರಾಗಿದ್ದು, ಪ್ರಸ್ತುತ ಕಂಕನಾಡಿ ಗ್ರಾಮದ, ಕಂಕನಾಡಿ ಪೊಲೀಸ್ ಠಾಣಾ ಹಿಂಬಾಗದಲ್ಲಿ ಕಳೆದ 20 ವರ್ಷಗಳಿಂದ ವಾಸ ಮಾಡಿಕೊಂಡಿರುತ್ತಾರೆ.
ಘಟನೆಯ ಬಗ್ಗೆ ಜಿಲ್ಲಾಧಿಕಾರಿಗಳ ಬಳಿ ಮಾತನಾಡಿರುವ ಸಚಿವ ಯು.ಟಿ. ಖಾದರ್ ಗಾಯಾಳುಗಳ ಚಿಕಿತ್ಸೆಗೆ ಸರಕಾರದಿಂದಲೇ ವೆಚ್ಚ ಭರಿಸಲು, ಮೃತಪಟ್ಟ ಕುಟುಂಬದವರಿಗೆ ಇಂದೇ ಪರಿಹಾರ ಮೊತ್ತ ನೀಡಲು ಸೂಚನೆ ನೀಡಿದ್ದಾರೆ

