ಮಂಗಳೂರು: ಕಲಾಮೃತ ಮಂಗಳೂರು ಹಾಗೂ ನಮ್ಮ ಕುಡ್ಲ ಪ್ರಸ್ತುತ ಪಡಿಸುವ ಶಾರದಾ ವಿದ್ಯಾಲಯ ಮಂಗಳೂರು ಇದರ ಸಹಕಾರದೊಂದಿಗೆ “ಭಾವಸಂಗಮ” ಜಿಲ್ಲಾ ಮಟ್ಟದ ಭಕ್ತಿಗೀತೆ, ಭಾವಗೀತೆ ಹಾಗೂ ದೇಶಭಕ್ತಿ ಗೀತೆಗಳ ವೈಯಕ್ತಿಕ ಗಾಯನ ಸ್ಪರ್ಧೆಯನ್ನು ಜುಲೈ 18,19 ಹಾಗೂ 26ರಂದು ಮಂಗಳೂರಿನಲ್ಲಿ ಆಯೋಜಿಸಲಾಗಿದೆ ಎಂದು ಕಲಾಮೃತ ಸದಸ್ಯ ಗಣೇಶ್ ಸೋಮಯಾಜಿ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಪರ್ಧೆಯ ಪ್ರಥಮ ಹಂತವು ಜುಲೈ 18 ಮತ್ತು 19ರಂದು ನವರತ್ನ ಪ್ಯಾಲೇಸ್ನಲ್ಲಿ ಹಾಗೂ ದ್ವಿತೀಯ ಹಂತದ ಸೆಮಿಫೈನಲ್ ಮತ್ತು ಗ್ರ್ಯಾಂಡ್ ಫಿನಾಲೆ ಜುಲೈ 26ರಂದು ಶಾರದಾ ವಿದ್ಯಾಲಯ, ಕೊಡಿಯಾಲ್ ಬೈಲ್ನಲ್ಲಿ ಬೆಳಿಗ್ಗೆ 9 ಗಂಟೆಯಿಂದ ನಡೆಯಲಿದೆ ಎಂದರು.
ಸ್ಪರ್ಧೆಯಲ್ಲಿ 12 ರಿಂದ 18 ವರ್ಷದ ವಿದ್ಯಾರ್ಥಿಗಳು ಹಾಗೂ 18 ವರ್ಷ ಮೇಲ್ಪಟ್ಟ ಸಾರ್ವಜನಿಕರು ಭಾಗವಹಿಸಬಹುದು. ಪ್ರಥಮ ಹಂತದಲ್ಲಿ ಕನ್ನಡ, ತುಳು ಹಾಗೂ ಕೊಂಕಣಿ ಭಾಷೆಯ ಭಕ್ತಿಗೀತೆಗಳನ್ನು ಮಾತ್ರ ಹಾಡಬೇಕು. ಪಲ್ಲವಿ ಮತ್ತು ಒಂದು ಚರಣ ಸೇರಿದಂತೆ ಗರಿಷ್ಠ ಮೂರು ನಿಮಿಷಗಳ ಕಾಲಾವಕಾಶ ನೀಡಲಾಗಿದ್ದು, ಪಕ್ಕವಾದ್ಯಗಳಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.

ಪ್ರಥಮ ಹಂತದಲ್ಲಿ ಆಯ್ಕೆಯಾಗುವ ಸ್ಪರ್ಧಿಗಳು ಸೆಮಿಫೈನಲ್ ಹಾಗೂ ಗ್ರ್ಯಾಂಡ್ ಫಿನಾಲೆಯಲ್ಲಿ ಭಾವಗೀತೆಗಳನ್ನು ಹಾಡಬೇಕಿದ್ದು, ಚಲನಚಿತ್ರಗಳ ಭಾವಗೀತೆಗಳಿಗೂ ಅವಕಾಶ ಕಲ್ಪಿಸಲಾಗಿದೆ. ಸ್ಪರ್ಧೆಯಲ್ಲಿ ರಾಗ, ತಾಳ ಹಾಗೂ ಭಾವ ಸ್ಪಷ್ಟವಾಗಿರಬೇಕು. ವಿದ್ಯಾರ್ಥಿಗಳು ಶಾಲೆಯ ಗುರುತಿನ ಚೀಟಿ ಹಾಗೂ ಸಾರ್ವಜನಿಕರು ಆಧಾರ್ ಕಾರ್ಡ್ ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಹೇಳಿದರು.
ಸ್ಪರ್ಧೆಯಲ್ಲಿ ಭಾಗವಹಿಸುವ ಪ್ರತಿಯೊಬ್ಬ ಸ್ಪರ್ಧಿಗೂ ಪ್ರಶಂಸಾ ಪತ್ರ ಹಾಗೂ ಪದಕ ನೀಡಲಾಗುವುದು. ವಿಜೇತರಿಗೆ ಚಿನ್ನ ಮತ್ತು ಬೆಳ್ಳಿಯ ಪದಕಗಳೊಂದಿಗೆ ಪ್ರಮಾಣಪತ್ರಗಳನ್ನು ಪ್ರದಾನ ಮಾಡಲಾಗುವುದೆಂದರು .
ಹೆಚ್ಚಿನ ಮಾಹಿತಿಗಾಗಿ ಸಂತೋಷ್ ಅಮೀನ್ 9880584366 ಮತ್ತು ಟಿಂಕು ಕುವರ್ 9353221210 ಅವರನ್ನು ಸಂಜೆ 3 ರಿಂದ 7 ಗಂಟೆ ಅವಧಿಯಲ್ಲಿ ಸಂಪರ್ಕಿಸಬಹುದೆಂದರು .
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ಮುರಳೀಧರ್ ಶೆಟ್ಟಿ ,ಪ್ರಶಾಂತ್ ಶೇಟ್ ,ಲೀಲಾಕ್ಷ ಕರ್ಕೇರ, ಪದ್ಮಜಾ ಎನ್ ,ನಾಗೇಂದ್ರ ಎನ್ , ಸೋಮಶೇಖರ್ ಮುಂತಾದವರು ಉಪಸ್ಥಿತರಿದ್ದರು.

