ದಾವಣಗೆರೆ: ದಾವಣಗೆರೆಯ ಜನಪ್ರಿಯ ಸಾಹಿತಿ, 36ಕ್ಕೂ ಹೆಚ್ಚು ಕೃತಿಗಳ ಕರ್ತೃ, ಸಾಮಾಜಿಕ ಹಾಗೂ ಸಾಹಿತ್ಯ ಸಂಘಟಕರಾದ ಎಂ. ಬಸವರಾಜ್ ಅವರಿಗೆ ‘ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ–2026’ ಪ್ರದಾನ ಮಾಡಲಾಗುತ್ತಿದೆ.
ಜುಲೈ 26ರಂದು ಕಾಸರಗೋಡು ಕನ್ನಡ ಭವನದಲ್ಲಿ ನಡೆಯಲಿರುವ ‘ರಜತ ಸಂಭ್ರಮ ಸಮಾರೋಪ ಕಾರ್ಯಕ್ರಮ’ ಹಾಗೂ ‘ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ’ದ ಅಂಗವಾಗಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಎಂ. ಬಸವರಾಜ್ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ.ಎನ್.ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ.ಕೆ. ವಾಮನ್ ರಾವ್ ಬೇಕಲ್ ಜಂಟಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ 36ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಎಂ. ಬಸವರಾಜ್ ಅವರು ಸಾಮಾಜಿಕ ಸೇವೆ, ಸಾಹಿತ್ಯ ಸಂಘಟನೆ ಹಾಗೂ ಕನ್ನಡ ನಾಡು-ನುಡಿಯ ಅಭಿವೃದ್ಧಿಗೆ ಸಲ್ಲಿಸಿರುವ ವಿಶಿಷ್ಟ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜುಲೈ 26ರಂದು ನಡೆಯಲಿರುವ ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಹಲವು ಗಣ್ಯರಿಗೆ ರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

