ತುಮಕೂರು: ಮತದಾರರ ಪಟ್ಟಿ ಪರಿಷ್ಕರಣೆ ಕರ್ತವ್ಯದ ವೇಳೆ ಸಾವನ್ನಪ್ಪಿದ ವಿಎ ಭುವನಾ ಅವರ ಕುಟುಂಬಕ್ಕೆ ರಾಜ್ಯ ಸರ್ಕಾರದಿಂದ ಆರ್ಥಿಕ ನೆರವು ಹಾಗೂ ಉದ್ಯೋಗ ಭರವಸೆ ನೀಡಲಾಗಿದೆ. ಮೃತ ಭುವನಾ ಕುಟುಂಬಕ್ಕೆ 1 ಕೋಟಿ ರೂ. ವಿಮೆ ಮೊತ್ತವನ್ನು 15 ದಿನಗಳೊಳಗೆ ಬಿಡುಗಡೆ ಮಾಡಲಾಗುವುದು. ಜೊತೆಗೆ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರದಲ್ಲಿ ಉದ್ಯೋಗ ಕಲ್ಪಿಸಲಾಗುವುದು ಎಂದು ಕಂದಾಯ ಸಚಿವರೂ ಆದ ಉಪ ಮುಖ್ಯಮಂತ್ರಿ ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮೃತ ಭುವನಾ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಳಿಕ ಮಾತನಾಡಿದ ಡಿಸಿಎಂ ಪರಮೇಶ್ವರ್, “ಭುವನಾ ಅವರ ಕುಟುಂಬ ಸಂಕಷ್ಟದಲ್ಲಿದೆ. ಸರ್ಕಾರ ಅವರ ಜೊತೆ ನಿಂತಿದೆ. ಈಗಾಗಲೇ ವಿಮೆ ಸಂಬಂಧಿತ ಪ್ರಕ್ರಿಯೆಯನ್ನು ವೇಗಗೊಳಿಸುವಂತೆ ಸೂಚನೆ ನೀಡಲಾಗಿದೆ. 15 ದಿನಗಳೊಳಗೆ 1 ಕೋಟಿ ರೂ. ವಿಮೆ ಮೊತ್ತ ಕುಟುಂಬಕ್ಕೆ ತಲುಪುವಂತೆ ಕ್ರಮ ಕೈಗೊಳ್ಳಲಾಗುವುದು” ಎಂದು ಭರವಸೆ ನೀಡಿದರು.
ಇದಕ್ಕು ಜೊತೆಗೆ, ಚುನಾವಣಾ ಆಯೋಗದಿಂದಲೂ ವಿಶೇಷ ಪರಿಹಾರವಾಗಿ 30 ಲಕ್ಷ ರೂ. ಮಂಜೂರು ಮಾಡಿಸಲು ಪ್ರಯತ್ನಿಸಲಾಗುವುದು ಎಂದು ಅವರು ಹೇಳಿದರು. “ಇದು ಕರ್ತವ್ಯದಲ್ಲಿದ್ದಾಗ ಸಂಭವಿಸಿದ ದುರ್ಘಟನೆ. ಹೀಗಾಗಿ ಸರ್ಕಾರದ ಮಟ್ಟದಲ್ಲಿ ಸಿಗಬೇಕಾದ ಎಲ್ಲಾ ನೆರವನ್ನೂ ಒದಗಿಸುತ್ತೇವೆ. ಕುಟುಂಬದಲ್ಲಿ ಒಬ್ಬರಿಗೆ ಸರ್ಕಾರಿ ಉದ್ಯೋಗ ನೀಡುವ ಬಗ್ಗೆ ಸಹ ಸಕಾರಾತ್ಮಕ ನಿರ್ಧಾರ ಕೈಗೊಳ್ಳಲಾಗುತ್ತದೆ” ಎಂದು ಪರಮೇಶ್ವರ್ ತಿಳಿಸಿದರು.

