ಅಯೋಧ್ಯೆ : ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರದ ದೇಣಿಗೆ ಕಳ್ಳತನದ ಆರೋಪಗಳ ಹಿನ್ನೆಲೆಯಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮತ್ತು ಟ್ರಸ್ಟಿ ಡಾ.ಅನಿಲ್ ಮಿಶ್ರಾ ಅವರ ರಾಜೀನಾಮೆಯನ್ನು ಅಂಗೀಕರಿಸಿದೆ ಎಂದು ಟ್ರಸ್ಟ್ನ ಖಜಾಂಚಿ ಸ್ವಾಮಿ ಗೋವಿಂದ ದೇವ್ ಗಿರಿ ಮಹಾರಾಜ್ ತಿಳಿಸಿದ್ದಾರೆ.

ರಾಮ ಮಂದಿರದ ಆವರಣದಲ್ಲಿರುವ ಅತಿಥಿಗೃಹದಲ್ಲಿ ನಡೆದ ಈ ಮಹತ್ವದ ಸಭೆಯ ನಂತರ ಟ್ರಸ್ಟ್ನ ಖಜಾಂಚಿ ಸ್ವಾಮಿ ಗೋವಿಂದ ದೇವ್ ಗಿರಿ ಮಹಾರಾಜ್ ಸುದ್ದಿಗಾರರೊಂದಿಗೆ ಮಾತನಾಡಿ, “ತಪ್ಪಿತಸ್ಥರಿಗೆ ಶಿಕ್ಷೆಯಾಗುವುದು ಖಚಿತ” ಎಂದು ಸ್ಪಷ್ಟಪಡಿಸಿದರು. ಅವರು ಮಾಧ್ಯಮಗಳಿಗೆ ತಿಳಿಸಿದ ಪ್ರಕಾರ, ಎಸ್ಐಟಿಯ ಅಂತಿಮ ವರದಿ ಬಂದ ನಂತರ ಜುಲೈ 22 ರಂದು ಮತ್ತೊಂದು ಸಭೆ ಕರೆಯಲಾಗುವುದು. “ನಮ್ಮ ಟ್ರಸ್ಟ್ ಯಾವುದೇ ಲೋಪವಿಲ್ಲದೆ ಪಾರದರ್ಶಕ ಆಡಳಿತ ನೀಡಲು ಬದ್ಧವಾಗಿದೆ. ಇದಕ್ಕಾಗಿ ನಿರ್ದಿಷ್ಟ ಅಧಿಕಾರಿಗಳನ್ನು ನೇಮಿಸಲು ನಾವು ಸಣ್ಣ ಸಮಿತಿಯೊಂದನ್ನು ರಚಿಸಿದ್ದೇವೆ. ಕಳ್ಳತನವು ಕಳ್ಳತನವೇ. ಈ ಬಗ್ಗೆ ಎಸ್ಐಟಿ ತನಿಖೆ ನಡೆಸುತ್ತಿದ್ದು, ಅದು ಆಡಳಿತದ ಜವಾಬ್ದಾರಿಯಾಗಿದೆ” ಎಂದು ಗಿರಿ ಮಹಾರಾಜ್ ಹೇಳಿದರು.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡದ (ಎಸ್ಐಟಿ) ತನಿಖೆಯ ಮೇಲೆ ರಾಮ ಮಂದಿರ ಟ್ರಸ್ಟ್ ಸಂಪೂರ್ಣ ವಿಶ್ವಾಸ ವ್ಯಕ್ತಪಡಿಸಿದೆ. ಈ ವಿವಾದದ ಕೇಂದ್ರಬಿಂದುವಾಗಿರುವ ಚಂಪತ್ ರಾಯ್ ಅವರ ಆಪ್ತ ಸಹಾಯಕ ಟಿನ್ನು ಯಾದವ್ ಸೇರಿದಂತೆ 8 ಜನರನ್ನು ಎಸ್ಐಟಿ ಈಗಾಗಲೇ ಬಂಧಿಸಿದೆ. ಚಂಪತ್ ರಾಯ್ ಮತ್ತು ಮಿಶ್ರಾ ಅವರನ್ನು ಎಸ್ಐಟಿ ಹಾಗೂ ಅಯೋಧ್ಯೆ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಇನ್ನೂ ಅವರ ವಿರುದ್ಧ ಯಾವುದೇ ಎಫ್ಐಆರ್ ದಾಖಲಾಗಿಲ್ಲ.

ಕೃಷ್ಣ ಮೋಹನ್ ಅವರು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ದೀರ್ಘಕಾಲದ ಹಿರಿಯ ಸದಸ್ಯ ಮತ್ತು ನಂಬಿಕಸ್ಥ ಪದಾಧಿಕಾರಿಯಾಗಿದ್ದಾರೆ. ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಮತ್ತು ವಿಶ್ವ ಹಿಂದೂ ಪರಿಷತ್ (VHP) ಸಂಘಟನೆಗಳೊಂದಿಗೆ ದಶಕಗಳಿಂದ ನಿಕಟ ಸಂಬಂಧ ಹೊಂದಿದ್ದಾರೆ. ಕೃಷ್ಣ ಮೋಹನ್ ಅವರು ವಿಶ್ವ ಹಿಂದೂ ಪರಿಷತ್ನ ಹಿರಿಯ ಪದಾಧಿಕಾರಿಯಾಗಿದ್ದು, ಅಯೋಧ್ಯೆಯ ರಾಮ ಮಂದಿರ ಆಂದೋಲನದ ಸಮಯದಿಂದಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ರಾಮ ಮಂದಿರ ಟ್ರಸ್ಟ್ನ ಆಂತರಿಕ ವ್ಯವಹಾರಗಳು, ಹಣಕಾಸು ನಿರ್ವಹಣೆ ಮತ್ತು ಮಂದಿರದ ದೈನಂದಿನ ಚಟುವಟಿಕೆಗಳ ಉಸ್ತುವಾರಿಯಲ್ಲಿ ಇವರು ಹಿಂದಿನಿಂದಲೂ ಪ್ರಮುಖ ಪಾತ್ರ ವಹಿಸುತ್ತಿದ್ದರು. ಆಡಳಿತಾತ್ಮಕವಾಗಿ ಇವರಿಗಿರುವ ಹಿಡಿತ ಮತ್ತು ಸ್ವಚ್ಛ ಇಮೇಜ್ ಕಾರಣದಿಂದಾಗಿ ಇವರನ್ನು ರಾಮ ಮಂದಿರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಆಯ್ಕೆ ಮಾಡಲಾಗಿದೆ.

