ಮಂಗಳೂರು : ಯಕ್ಷಗಾನವನ್ನು ಭಾಷೆಯ ಗಡಿಗಳನ್ನು ಮೀರಿ ಜಾಗತಿಕ ಮಟ್ಟಕ್ಕೆ ಪರಿಚಯಿಸಿದ “ಯಕ್ಷನಂದನ” ಸಂಸ್ಥೆಯ 45ನೇ ವರ್ಷಾಚರಣೆ ಕಾರ್ಯಕ್ರಮವು ಜುಲೈ 10ರಂದು ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದ “ರಾಮರಮಣ” ಮಂಟಪದಲ್ಲಿ ನಡೆಯಲಿದೆ ಎಂದು ಯಕ್ಷನಂದನದ ಸಂಚಾಲಕ ಪಿ. ಸಂತೋಷ್ ಐತಾಳ ತಿಳಿಸಿದರು.
ನಗರದ ಪತ್ರಿಕಾಭವನದಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆಯ ಸಂಸ್ಥಾಪಕರಾದ ದಿವಂಗತ ಪಿ.ವಿ. ಐತಾಳರ ತಿಥಿಯ ಅಂಗವಾಗಿ ಮಧ್ಯಾಹ್ನ 2.15ರಿಂದ ಸಂಜೆ 5 ಗಂಟೆಯವರೆಗೆ ಅವರು ರಚಿಸಿದ ‘ನರಕಾಸುರ ಮೋಕ್ಷ’ ಹಾಗೂ ‘ಬ್ರಹ್ಮಕಪಾಲ’ ಪ್ರಸಂಗಗಳ ದೃಶ್ಯಾವಳಿಗಳ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.
ಇಂಗ್ಲಿಷ್ ಭಾಷೆಯಲ್ಲಿ ಶ್ರೀದೇವಿ ಮಹಾತ್ಮೆ ಯಕ್ಷಗಾನವನ್ನು ಸತತ ಎಂಟು ಗಂಟೆಗಳ ಕಾಲ ಪ್ರದರ್ಶಿಸಿದ ಹೆಗ್ಗಳಿಕೆ ಯಕ್ಷನಂದನ ತಂಡಕ್ಕಿದೆ ಎಂದರು .
ಯಕ್ಷನಂದನ ವೆಬ್ಸೈಟ್ ಅನ್ನು ಬಿಡುಗಡೆ ಮಾಡಲಾಗುವುದು. ಅಲ್ಲದೆ, ದಿವಂಗತ ಪಿ.ವಿ. ಐತಾಳರ ಸ್ಮರಣಾರ್ಥ ಶ್ರೀ ಪಿ.ವಿ. ಐತಾಳ ಮೆಮೋರಿಯಲ್ ‘ವೆಂಕಟ ರತ್ನ’ ಚಾರಿಟೇಬಲ್ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಿಸಲಾಗುವುದು ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ರವಿ ಅಲೆವೂರಾಯ ವರ್ಕಾಡಿ, ಶಿವತೇಜ ಐತಾಳ ಹಾಗೂ ಶರತ್ ಉಪಸ್ಥಿತರಿದ್ದರು.

