ಮೈಸೂರು, ಜು.11: ಖ್ಯಾತ ಹಿನ್ನೆಲೆ ಗಾಯಕಿ, ಗಾನಕೋಗಿಲೆ ಎಸ್. ಜಾನಕಿ(88)ಅವರು ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದು ಇಂದು ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಈ ವರ್ಷದ ಜನವರಿಯಲ್ಲಿ ಅವರ ಪುತ್ರ ಮುರಳಿಕೃಷ್ಣ ಅವರ ನಿಧನದಿಂದ ಜಾನಕಿ ಅವರು ತೀವ್ರ ಪುತ್ರಶೋಕ ಎದುರಿಸುತ್ತಿದ್ದರು.

ತೆಲುಗು, ಕನ್ನಡ, ತಮಿಳು, ಮಲಯಾಳಂ ಸೇರಿದಂತೆ 20ಕ್ಕೂ ಹೆಚ್ಚು ಭಾಷೆಗಳಲ್ಲಿ ಸುಮಾರು 48 ಸಾವಿರಕ್ಕೂ ಅಧಿಕ ಹಾಡುಗಳಿಗೆ ಧ್ವನಿಯಾಗಿದ್ದ ಅವರು, ತಮ್ಮ ವಿಶಿಷ್ಟ ಕಂಠಸಿರಿಯ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯ ಗೆದ್ದಿದ್ದರು.
ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದ ಎಸ್.ಜಾನಕಿ ಅವರಿಗೆ 4 ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, 33 ವಿವಿಧ ರಾಜ್ಯ ಚಲನಚಿತ್ರ ಪ್ರಶಸ್ತಿ, ಗೌರವ ಡಾಕ್ಟರೇಟ್, ತಮಿಳುನಾಡು ರಾಜ್ಯ ಸರ್ಕಾರದಿಂದ ಕಲೈಮಾಮಣಿ ಪ್ರಶಸ್ತಿ, ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಹಾಗೂ 2013ರಲ್ಲಿ ಪದ್ಮಭೂಷಣ ಪ್ರಶಸ್ತಿ ದೊರಕಿವೆ .

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ರೆಪಲ್ಲೆ ಗ್ರಾಮದಲ್ಲಿ 1938ರ ಏಪ್ರಿಲ್ 23ರಂದು ಜನಿಸಿದ ಜಾನಕಿಯಮ್ಮ ಮೂಲತಃ ತೆಲುಗಿನವರು, ಬಾಲ್ಯದಲ್ಲೇ ಸಂಗೀತಾಭ್ಯಾಸ ಆರಂಭಿಸಿ ನಂತರ ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ಹಿನ್ನೆಲೆ ಗಾಯಕರಲ್ಲಿ ಒಬ್ಬರಾಗಿದ್ದರು.ಪ್ರಸಿದ್ಧಿ ಪಡೆದು ಕನ್ನಡಿಗರ ಮನೆಮನಗಳಿಗೆ ಹತ್ತಿರವಾದದ್ದು ಕನ್ನಡ ಹಾಡುಗಳ ಮೂಲಕ. ಕನ್ನಡ ಭಾಷೆಯನ್ನು ಅತ್ಯಂತ ಸ್ಪಷ್ಟವಾಗಿ ಉಚ್ಚರಿಸುತ್ತಾ, ಇಲ್ಲಿನದ್ದೇ ಧ್ವನಿ ಎನ್ನುವಂತೆ ಅವರು ಸಾವಿರಾರು ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ.

ಅವರ ಅಗಲಿಕೆಯಿಂದ ಭಾರತೀಯ ಸಂಗೀತ ಲೋಕಕ್ಕೆ ಅಪಾರ ನಷ್ಟ ಉಂಟಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು, ಕಲಾವಿದರು ಹಾಗೂ ಗಣ್ಯರು ಕಂಬನಿ ಮಿಡಿದು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.

