ಕಾಸರಗೋಡು : ಮಂಡ್ಯ ಜಿಲ್ಲೆಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ, ಕವಿ,ಸಾಹಿತಿ ಹಾಗೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನಾರ್ಕಲಿ ಸಲೀಂ (ಸಲೀಂಪಾಷ) ಅವರಿಗೆ ಕಾಸರಗೋಡಿನ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.) ವತಿಯಿಂದ ಪ್ರದಾನವಾಗುವ ಪ್ರತಿಷ್ಠಿತ “ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ–2026” ಘೋಷಿಸಲಾಗಿದೆ.
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಚಿಣ್ಯ ಗ್ರಾಮದವರಾದ ಸಲೀಂಪಾಷ ಅವರು ದಿ.ಷೇಕ್ ಮಹಮ್ಮದ್ ಹಾಗೂ ಮಹಬೂಬ್ ಜಾನ್ ಅವರ ಪುತ್ರರಾಗಿದ್ದು, 1971ರ ಮಾರ್ಚ್ 20ರಂದು ಜನಿಸಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಚಿಣ್ಯದಲ್ಲಿ, ಪದವಿಪೂರ್ವ ಶಿಕ್ಷಣವನ್ನು ನಾಗಮಂಗಲದಲ್ಲಿ ಪೂರ್ಣಗೊಳಿಸಿದ ಅವರು ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಿಂದ ಪದವಿ ಹಾಗೂ ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಜೊತೆಗೆ ಆರೋಗ್ಯ ನಿರೀಕ್ಷಕರ ಡಿಪ್ಲೊಮಾವನ್ನು ಪಡೆದಿದ್ದಾರೆ.
ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಮಲೇರಿಯಾ ವಿಭಾಗದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಅವರು ಆರೋಗ್ಯ ಇಲಾಖೆಯಲ್ಲಿ ಒಟ್ಟು 29 ವರ್ಷಗಳ ಸೇವೆ ಸಲ್ಲಿಸಿದ್ದಾರೆ. ಮಂಡ್ಯ ಜಿಲ್ಲೆಯಲ್ಲಿ 25 ವರ್ಷ ಸೇವೆ ಸಲ್ಲಿಸಿರುವ ಅವರು ಮಂಗಳೂರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯರ ತರಬೇತಿ ಕೇಂದ್ರದ ಪ್ರಭಾರ ಪ್ರಾಂಶುಪಾಲರಾಗಿ, ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳ ತರಬೇತಿ ಕೇಂದ್ರದ ಬೋಧಕರಾಗಿ ಹಾಗೂ ವೆನ್ಲಾಕ್ ಪ್ಯಾರಾಮೆಡಿಕಲ್ ಡಿಎಚ್ಐ ವಿಭಾಗದ ಬೋಧಕರಾಗಿ ಕಾರ್ಯನಿರ್ವಹಿಸಿ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ.
ಮೂರು ದಶಕಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಅನಾರ್ಕಲಿ ಸಲೀಂ ಅವರು ವಿವಿಧ ಪತ್ರಿಕೆಗಳಲ್ಲಿ ಅಂಕಣಕಾರ, ಕವಿ, ನಿರೂಪಕ ಹಾಗೂ ಕಲಾವಿದರಾಗಿ ಗುರುತಿಸಿಕೊಂಡಿದ್ದಾರೆ. ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಜಿಲ್ಲಾಡಳಿತದಿಂದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಆರೋಗ್ಯ ಇಲಾಖೆಯಲ್ಲಿನ ಅತ್ಯುತ್ತಮ ಸೇವೆಗಾಗಿ ಜಿಲ್ಲಾ ಸರ್ವೋತ್ತಮ ಸೇವಾ ಪ್ರಶಸ್ತಿ ಸೇರಿದಂತೆ ರಾಜ್ಯಮಟ್ಟದ ಚುಟುಕು ಶ್ರೀ, ಕಾವ್ಯ ಶ್ರೀ, ಚೈತನ್ಯ ಶ್ರೀ ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ಬೀದರ್ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ, ಮೈಸೂರು ಆಕಾಶವಾಣಿ ಸೇರಿದಂತೆ ರಾಜ್ಯದ ವಿವಿಧ ಕವಿಗೋಷ್ಠಿಗಳಲ್ಲಿ ಕವಿತೆ ವಾಚಿಸಿರುವ ಅವರು ‘ಹೂ ಅರಳುವ ಮುನ್ನ’ ಹನಿಗವನ ಸಂಕಲನವನ್ನು ಪ್ರಕಟಿಸಿದ್ದಾರೆ. ಇವರ ಚುಟುಕುಗಳು, ಹನಿಗವನಗಳು, ಕವಿತೆಗಳು, ಲೇಖನಗಳು, ವಿಮರ್ಶಾ ಬರಹಗಳು ಹಾಗೂ ಸಾಧಕರ ಪರಿಚಯ ಲೇಖನಗಳು ದಿನಪತ್ರಿಕೆ, ವಾರಪತ್ರಿಕೆ ಮತ್ತು ಮಾಸಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.
ಕಲಾವಿದರೂ ಆಗಿರುವ ಅವರು ಕುರುಕ್ಷೇತ್ರ, ದಾನಶೂರ ಕರ್ಣ, ಪಾದುಕಾ ಕಿರೀಟಿ ಸೇರಿದಂತೆ ಹಲವು ಪೌರಾಣಿಕ ನಾಟಕಗಳಲ್ಲಿ ಅಭಿಮನ್ಯು, ದುಶ್ಯಾಸನ, ಪರಶುರಾಮ, ಯಮ, ಜಯದ್ರಥ ಸೇರಿದಂತೆ ವಿವಿಧ ಪಾತ್ರಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಆರೋಗ್ಯ ಜಾಗೃತಿಗೆ ಸಂಬಂಧಿಸಿದ ಅನೇಕ ಕವಿತೆಗಳು, ಲಾವಣಿಗಳು ಹಾಗೂ ಬೀದಿ ನಾಟಕಗಳನ್ನು ರಚಿಸಿರುವುದು ಅವರ ಮತ್ತೊಂದು ವಿಶೇಷ ಸಾಧನೆಯಾಗಿದೆ.
ಜುಲೈ 26ರಂದು ಕಾಸರಗೋಡಿನ ಕನ್ನಡ ಭವನದ ರಜತ ಸಂಭ್ರಮ ಸಮಾರೋಪ ಅಂಗವಾಗಿ ನಡೆಯಲಿರುವ “ಕರ್ನಾಟಕ ಗಡಿನಾಡು ಕನ್ನಡ ಸಮ್ಮೇಳನ”ದಲ್ಲಿ ಅನಾರ್ಕಲಿ ಸಲೀಂ ಅವರಿಗೆ “ನಾಡೋಜ ಡಾ. ಕಯ್ಯಾರ ಸದ್ಭಾವನಾ ರಾಷ್ಟ್ರೀಯ ಪ್ರಶಸ್ತಿ–2026” ಪ್ರದಾನ ಮಾಡಲಾಗುವುದು ಎಂದು ಸಮ್ಮೇಳನ ಸಮಿತಿ ಅಧ್ಯಕ್ಷ ಡಾ. ಕೆ.ಎನ್.ವೆಂಕಟ್ರಮಣ ಹೊಳ್ಳ ಹಾಗೂ ಕನ್ನಡ ಭವನದ ಸ್ಥಾಪಕ ಅಧ್ಯಕ್ಷ ಡಾ. ಕೆ.ವಾಮನ್ ರಾವ್ ಬೇಕಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

