ಮಂಗಳೂರು : ವಿಶ್ವಪ್ರಸಿದ್ಧ ಶ್ರೀ ಜಗನ್ನಾಥ ರಥಯಾತ್ರೆ ಉತ್ಸವದ ಅಂಗವಾಗಿ ಮಂಗಳೂರಿನ ಕುಡುಪು ಕಟ್ಟೆಯ ಇಸ್ಕಾನ್ ಶ್ರೀ ಜಗನ್ನಾಥ ಮಂದಿರದ ಆಶ್ರಯದಲ್ಲಿ ಜುಲೈ 16ರಂದು (ಗುರುವಾರ) ಶ್ರೀ ಜಗನ್ನಾಥ ರಥಯಾತ್ರೆ ವಿಜೃಂಭಣೆಯಿಂದ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಪ್ರೇಮ ಭಕ್ತಿ ದಾಸ್ ತಿಳಿಸಿದರು.
ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಸ್ಕಾನ್ ಸಂಸ್ಥಾಪಕ ಆಚಾರ್ಯರಾದ ಶ್ರೀಲ ಪ್ರಭುಪಾದರ ಪ್ರೇರಣೆಯಿಂದ ವಿಶ್ವದ ನ್ಯೂಯಾರ್ಕ್, ಲಂಡನ್, ಮಾಂಟ್ರಿಯಲ್, ಲಾಸ್ ಏಂಜಲೀಸ್, ಮೆಲ್ಬೋರ್ನ್ ಸೇರಿದಂತೆ ಭಾರತದ ನವದೆಹಲಿ, ಮುಂಬೈ, ಕೋಲ್ಕತ್ತಾ, ಬೆಂಗಳೂರು, ಚೆನ್ನೈ, ಹೈದರಾಬಾದ್ ಹಾಗೂ ಕೊಯಮತ್ತೂರು ಸೇರಿದಂತೆ ಹಲವು ನಗರಗಳಲ್ಲಿ ಪ್ರತಿವರ್ಷ ಜಗನ್ನಾಥ ರಥಯಾತ್ರೆ ಆಯೋಜಿಸಲಾಗುತ್ತಿದೆ ಎಂದರು.
ಈ ಬಾರಿಯ ಮಂಗಳೂರು ರಥಯಾತ್ರೆಯಲ್ಲಿ ದೇಶ-ವಿದೇಶಗಳಿಂದ ನೂರಾರು ಭಕ್ತರು ಹಾಗೂ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಉದ್ಘಾಟನಾ ಸಮಾರಂಭದಲ್ಲಿ ಇಸ್ಕಾನ್ನ ಹಿರಿಯ ಸನ್ಯಾಸಿಗಳು ಹಾಗೂ ನಗರದ ಗಣ್ಯರು ಉಪಸ್ಥಿತರಿರುವರು ಎಂದು ತಿಳಿಸಿದರು.
ರಥಯಾತ್ರೆಯು ಮಧ್ಯಾಹ್ನ 3.30ಕ್ಕೆ ಲೇಡಿ ಹಿಲ್ ಸರ್ಕಲ್ನಿಂದ ಆರಂಭವಾಗಿ ಎಂಸಿಸಿ ಜಂಕ್ಷನ್, ಟಿ.ಎಂ.ಎ.ಪೈ ಹಾಲ್, ಪಿವಿಎಸ್ ಸರ್ಕಲ್, ನವಭಾರತ ಸರ್ಕಲ್, ಕೋಡಿಯಾಲ್ಬೈಲ್, ಹಂಪನಕಟ್ಟೆ, ಕ್ಲಾಕ್ ಟವರ್, ಸಿಟಿ ಸೆಂಟರ್ ಮಾಲ್ ಹಾಗೂ ಕೆ.ಎಸ್.ರಾವ್ ರಸ್ತೆ ಮಾರ್ಗವಾಗಿ ಸಂಚರಿಸಿ ಟೌನ್ ಹಾಲ್ನಲ್ಲಿ ಸಮಾಪ್ತಿಗೊಳ್ಳಲಿದೆ. ಸಂಜೆ 5.30ರ ಸುಮಾರಿಗೆ ರಥ ಟೌನ್ ಹಾಲ್ ತಲುಪಲಿದ್ದು, ಬಳಿಕ ಭಕ್ತರಿಗೆ ಮಹಾಪ್ರಸಾದ ವಿತರಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು
ಈ ಬಾರಿಯ ಉತ್ಸವವು ಪುರಿ ಸಂಪ್ರದಾಯದ ಮಾದರಿಯಲ್ಲಿ ನಡೆಯಲಿದ್ದು, 2,000ಕ್ಕೂ ಅಧಿಕ ಗೃಹಸ್ಥ ಭಕ್ತರು ಭಗವಂತನಿಗೆ ‘ಭೋಗ’ (ನೈವೇದ್ಯ) ಅರ್ಪಿಸಲಿದ್ದಾರೆ. ಉತ್ಸವದ ವೇಳೆ ಎಲ್ಲರಿಗೂ ಉಚಿತ ಅನ್ನದಾನ (ಪ್ರಸಾದ ವಿತರಣೆ) ವ್ಯವಸ್ಥೆ ಮಾಡಲಾಗಿದ್ದು, ಟೌನ್ ಹಾಲ್ನಲ್ಲಿ ಯುವ ಸಬಲೀಕರಣ ಹಾಗೂ ವ್ಯಕ್ತಿತ್ವ ವಿಕಸನ ಕುರಿತ ವಿಶೇಷ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ.
ಪುರಾಣಗಳ ಪ್ರಕಾರ ಭಗವಂತನ ರಥವನ್ನು ಎಳೆಯುವವರಿಗೆ ಜನನ-ಮರಣಗಳ ಬಂಧನದಿಂದ ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆಯಿದ್ದು, ಮಂಗಳೂರು ನಗರದ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಆಧ್ಯಾತ್ಮಿಕ ಉತ್ಸವದ ಸದುಪಯೋಗ ಪಡೆದುಕೊಳ್ಳುವಂತೆ ಪ್ರೇಮ ಭಕ್ತಿ ದಾಸ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ಉದ್ಧವ್ ಪ್ರಾಣ ಕೃಷ್ಣ ದಾಸ್ ಹಾಗೂ ದೇವ ಧರ್ಮ ದಾಸ್ ಉಪಸ್ಥಿತರಿದ್ದರು.

