ಮಂಗಳೂರು : ನಗರದ ಬಂಗ್ರ ಕೂಳೂರು ಸಮೀಪ ತ್ರಿಶಾ ಕಾಲೇಜು ಬಳಿಯ ಕೊಟ್ಟಾರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅಭಿಸರಣ್ ಆಕ್ವೇಟಿಕ್ ಸೆಂಟರ್ನ ಲೋಕಾರ್ಪಣೆ ಸಮಾರಂಭ ಜುಲೈ 15ರಂದು ಸಂಜೆ 4.30ಕ್ಕೆ ನಡೆಯಲಿದೆ ಎಂದು ಸಂಸ್ಥೆಯ ಮುಖ್ಯ ತರಬೇತುದಾರ ಸಂಕೇತ್ ಬೆಂಗ್ರೆ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾರಂಭವನ್ನು ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಉದ್ಘಾಟಿಸಲಿದ್ದು, ನಾಡೋಜ ಡಾ.ಜಿ.ಶಂಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ವಿಶೇಷ ಅತಿಥಿಯಾಗಿ ಒಲಿಂಪಿಕ್ ಈಜುಪಟು ಶಿವಾನಿ ಕಟಾರಿಯಾ ಭಾಗವಹಿಸಲಿದ್ದು, ಕ್ರೀಡಾ ಕ್ಷೇತ್ರದ ಗಣ್ಯರು ಹಾಗೂ ವಿವಿಧ ಸಾರ್ವಜನಿಕ ಪ್ರತಿನಿಧಿಗಳು ಉಪಸ್ಥಿತರಿರುವರು ಎಂದು ತಿಳಿಸಿದರು.
ಈಜು ಕ್ಷೇತ್ರದಲ್ಲಿ ಕಳೆದ 35 ವರ್ಷಗಳಿಂದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ತಮ್ಮ ಕುಟುಂಬಕ್ಕೆ ಈ ಕ್ರೀಡೆಯೊಂದಿಗೆ ಅವಿನಾಭಾವ ಸಂಬಂಧವಿದೆ. ರಾಷ್ಟ್ರೀಯ ಮಟ್ಟದ ಈಜುಪಟು ಹಾಗೂ AUSTSWIM ಮತ್ತು NIS ಪ್ರಮಾಣೀಕೃತ ತರಬೇತುದಾರರಾದ ಶಿಲ್ಪಾ ಬೆಂಗ್ರೆ ಸೇರಿದಂತೆ ಕುಟುಂಬದ ಸದಸ್ಯರು ಹಲವು ವರ್ಷಗಳಿಂದ ಈಜು ತರಬೇತಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.
ಸ್ಪರ್ಧಾತ್ಮಕ ಈಜು, ಲೈಫ್ ಸೇವಿಂಗ್ ತರಬೇತಿ ಹಾಗೂ ಗುಣಮಟ್ಟದ ಕೋಚಿಂಗ್ನ್ನು ಒಂದೇ ಸೂರಿನಡಿ ಒದಗಿಸುವ ಉದ್ದೇಶದಿಂದ ಈ ಕೇಂದ್ರವನ್ನು ನಿರ್ಮಿಸಲಾಗಿದೆ. ಇಲ್ಲಿ 25 ಮೀಟರ್ ಉದ್ದದ, 10 ಲೇನ್ಗಳನ್ನು ಒಳಗೊಂಡ ಅಂತರರಾಷ್ಟ್ರೀಯ ಗುಣಮಟ್ಟದ ಶಾರ್ಟ್ ಕೋರ್ಸ್ ಈಜುಕೊಳ, ಆಧುನಿಕ ಚೇಂಜಿಂಗ್ ರೂಮ್ಗಳು ಹಾಗೂ ಬೇಸ್ಮೆಂಟ್ನಲ್ಲಿ ಅಂಡರ್ಗ್ರೌಂಡ್ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ವಿವರಿಸಿದರು.
ಪ್ರತಿದಿನ ಬೆಳಗ್ಗೆ 6ರಿಂದ 10 ಗಂಟೆಯವರೆಗೆ ಹಾಗೂ ಸಂಜೆ 3ರಿಂದ ರಾತ್ರಿ 8 ಗಂಟೆಯವರೆಗೆ ಈಜುಕೊಳ ಸಾರ್ವಜನಿಕರಿಗೆ ಲಭ್ಯವಿರಲಿದೆ. ಸಂಜೆ 3ರಿಂದ 4 ಗಂಟೆಯವರೆಗಿನ ಅವಧಿಯನ್ನು ಮಹಿಳೆಯರಿಗೆ ಮಾತ್ರ ಮೀಸಲಿಡಲಾಗಿದ್ದು, ಉಳಿದ ವೇಳೆಯಲ್ಲಿ ವಿವಿಧ ವಯೋಮಾನದವರಿಗೆ ತರಬೇತಿ ನೀಡಲಾಗುತ್ತದೆ. ಅಲ್ಲದೆ, ಶಾಲಾ ಮಕ್ಕಳಿಗೆ ವ್ಯವಸ್ಥಿತ ಈಜು ತರಬೇತಿ ನೀಡುವ ಉದ್ದೇಶದಿಂದ ವಿವಿಧ ಶಿಕ್ಷಣ ಸಂಸ್ಥೆಗಳೊಂದಿಗೆ ಸಹಭಾಗಿತ್ವವನ್ನು ರೂಪಿಸಲಾಗುತ್ತಿದೆ ಎಂದು ಸಂಕೇತ್ ಬೆಂಗ್ರೆ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಭಿಸರಣ್ ಅಕ್ವಾಟಿಕ್ ಸೆಂಟರ್ನ ಪ್ರಮುಖರಾದ ಶಿಲ್ಪಾ ಬೆಂಗ್ರೆ, ಶಶಿಕುಮಾರ್, ಸವಿತಾ ಹಾಗೂ ಶಾಹಿಲ್ ಉಪಸ್ಥಿತರಿದ್ದರು.

