ಮಂಗಳೂರು: ಮಂಗಳೂರಿನ ಕುಂಟಿಕಾನದಲ್ಲಿರುವ ಇನ್ಸ್ಟಾಮಾರ್ಟ್ ಸರಬರಾಜು ಕೇಂದ್ರದಲ್ಲಿ ಲಿಫ್ಟ್ ದುರಂತದಲ್ಲಿ ಮೃತಪಟ್ಟ ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮದ ಪೂಂಜಕೆರೆ ನಿವಾಸಿ, 28 ವರ್ಷದ ಯುವ ಕಾರ್ಮಿಕ ನೌಫಾಲ್ ಅವರ ಕುಟುಂಬಕ್ಕೆ ಕಂಪೆನಿಯು ₹15 ಲಕ್ಷ ಪರಿಹಾರವನ್ನು ನೀಡಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.
ಘಟನೆ ನಡೆದ ದಿನದಿಂದಲೇ ಮೃತ ಕಾರ್ಮಿಕನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕೆಂಬ ಉದ್ದೇಶದಿಂದ ಎಸ್.ಡಿ.ಟಿ.ಯು ಮಂಗಳೂರು ನಗರ ಜಿಲ್ಲಾ ಸಮಿತಿಯು ನಿರಂತರವಾಗಿ ಹೋರಾಟ ನಡೆಸಿತ್ತು.ಈ ಸಂಬಂಧ ಮಂಗಳೂರು ಜಿಲ್ಲಾಧಿಕಾರಿ, ಕಾರ್ಮಿಕ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಇನ್ಸ್ಟಾಮಾರ್ಟ್ ಕಂಪೆನಿಗೆ ಲಿಖಿತ ದೂರುಗಳನ್ನು ಸಲ್ಲಿಸಿ, ಕಾರ್ಮಿಕನ ಸಾವಿಗೆ ಸೂಕ್ತ ಪರಿಹಾರ ಮತ್ತು ಜವಾಬ್ದಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿತ್ತು.
ಈ ನಿರಂತರ ಹೋರಾಟದ ಫಲವಾಗಿ ಇಂದು ಕಂಪೆನಿಯು ಮೃತ ಕಾರ್ಮಿಕನ ಕುಟುಂಬಕ್ಕೆ ₹15 ಲಕ್ಷ ಪರಿಹಾರ ನೀಡಿರುವುದು ನ್ಯಾಯದತ್ತ ಒಂದು ಮಹತ್ವದ ಹೆಜ್ಜೆಯಾಗಿದೆ. ಈ ಹೋರಾಟಕ್ಕೆ ಸಹಕರಿಸಿದ ಅಧಿಕಾರಿಗಳು, ಕಾರ್ಮಿಕ ಇಲಾಖೆ ಹಾಗೂ ನ್ಯಾಯಕ್ಕಾಗಿ ಧ್ವನಿಯಾಗಿದ್ದ ಎಲ್ಲರಿಗೂ ಎಸ್.ಡಿ.ಟಿ.ಯು ಕೃತಜ್ಞತೆ ಸಲ್ಲಿಸುತ್ತದೆ.
ಆದರೆ, ಪರಿಹಾರ ನೀಡುವುದರೊಂದಿಗೆ ಪ್ರಕರಣ ಮುಗಿಯುವುದಿಲ್ಲ. ರಾಜ್ಯದಾದ್ಯಂತ ಖಾಸಗಿ ಸಂಸ್ಥೆಗಳು ಹಾಗೂ ಗೋದಾಮುಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರ ಸುರಕ್ಷತೆಗೆ ಅಗತ್ಯ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಲಿಫ್ಟ್ ಸೇರಿದಂತೆ ಎಲ್ಲಾ ಯಾಂತ್ರಿಕ ಉಪಕರಣಗಳ ಸುರಕ್ಷತಾ ತಪಾಸಣೆ ನಿಯಮಿತವಾಗಿ ನಡೆಯಬೇಕು. ಕಾರ್ಮಿಕರ ಜೀವದ ಭದ್ರತೆಯಲ್ಲಿ ಯಾವುದೇ ನಿರ್ಲಕ್ಷ್ಯಕ್ಕೆ ಅವಕಾಶ ಇರಬಾರದು.
ಮುಂದೆಯೂ ಕಾರ್ಮಿಕರ ಹಕ್ಕುಗಳು ಮತ್ತು ಸುರಕ್ಷತೆಯ ವಿಚಾರದಲ್ಲಿ ಎಸ್.ಡಿ.ಟಿ.ಯು ಯಾವುದೇ ರಾಜಿ ಮಾಡಿಕೊಳ್ಳದೆ ಹೋರಾಟವನ್ನು ಮುಂದುವರಿಸಲಿದೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಬೆಂಗರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

