ಧಾರವಾಡ : ವೈದ್ಯರು ನೀಡುವ ಚಿಕಿತ್ಸೆಯ ಪ್ರತಿಯೊಂದೂ ಆಯಾಮವೂ ರೋಗಿಯ ಜೀವ ಮತ್ತು ಆರೋಗ್ಯವನ್ನು ಕಾಪಾಡುವುದೇ ಆಗಿದ್ದು, ಮನುಕುಲದ ಜೀವ ರಕ್ಷಣೆಯ ಪವಿತ್ರ ವೃತ್ತಿ ವೈದ್ಯರದಾಗಿದೆ ಎಂದು ಹಿರಿಯ ಸ್ತ್ರೀ ರೋಗ ತಜ್ಞೆ ಡಾ.ನಿರ್ಮಲಾ ಮಹಾಬಲಶೆಟ್ಟಿ ಹೇಳಿದರು.

ಅವರು ನಗರದ ಭಾರತೀಯ ವೈದ್ಯಕೀಯ ಸಂಘ(ಐಎಂಎ)ದ ಮಹಿಳಾ ವಿಭಾಗವು ವೈದ್ಯರ ದಿನಾಚರಣೆಯ ಅಂಗವಾಗಿ ರವಿವಾರ ಹಮ್ಮಿಕೊಂಡಿದ್ದ ವಿಶೇಷ ಸಮಾರಂಭದಲ್ಲಿ ತಮಗೆ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡುತ್ತಿದ್ದರು. ರೋಗಿಯೊಂದಿಗೆ ಮೃದು ಮಾತು, ಸಹಾನುಭೂತಿಯ ಜೊತೆಗೆ ರೋಗ ನಿವಾರಣೆಗೆ ಪೂರಕವಾದ ಹೃದ್ಯ ಸ್ಪಂದನೆಯಿಂದ ರೋಗಿಯು ಆತ್ಮವಿಶ್ವಾಸದಿಂದ ಮಾನಸಿಕ ಚೈತನ್ಯವನ್ನು ಹೊಂದಲು ಸಾಧ್ಯವಾಗುತ್ತದೆ. ಇದರಿಂದ ಚಿಕಿತ್ಸೆ ಬೇಗ ಫಲಕಾರಿಯಾಗುತ್ತದೆ ಎಂದರು.

ವೈದ್ಯರ ವೃತ್ತಿಯ ಬದ್ಧತೆ, ಜ್ಞಾನ ಕ್ಷಿತಿಜ, ಕೌಶಲ, ಹೊಸ ವೈದ್ಯಕೀಯ ಅನ್ವೇಷಣೆಗಳ ಅವಲೋಕನ ವಿಸ್ತಾರವಾದಂತೆ ಪ್ರತೀ ವೈದ್ಯರೂ ತಮ್ಮ ವಿಶೇಷತೆಯ ರೋಗ ನಿವಾರಣೆಯ ಕ್ಷೇತ್ರಗಳಲ್ಲಿ ವ್ಯಾಪಕ ಸಾಧನೆ ಮಾಡಿ ಜನಪ್ರಿಯತೆ ಹೊಂದಲು ಸಾಧ್ಯವಾಗುತ್ತದೆ ಎಂದೂ ಡಾ.ನಿರ್ಮಲಾ ಮಹಾಬಲಶೆಟ್ಟಿ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಐಎಂಎ ಮಹಿಳಾ ವಿಭಾಗದ ಅಧ್ಯಕ್ಷೆ ಡಾ.ಸಿದ್ದಗಂಗಾ ಹಳ್ಳಿಕೇರಿ, ಸಮಾಜದ ಮೇಲೆ ಶಾಶ್ವತವಾದ ಪ್ರಭಾವ ಬೀರಿರುವ ವೈದ್ಯರ ಸೇವೆಯನ್ನು ಮತ್ತು ಅವರ ಜೀವಮಾನದ ಸಾಧನೆಗಳನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಐಎಂಎ ಮಹಿಳಾ ವಿಭಾಗವು ನಿರಂತರ ಮಾಡುತ್ತಿದೆ. ಅತ್ಯಂತ ಸರಳ ವ್ಯಕ್ತಿತ್ವದಿಂದ ವೈದ್ಯಕೀಯ ಮೌಲ್ಯಗಳೊಂದಿಗೆ ಬದುಕಿರುವ ಹಿರಿಯ ಪ್ರಸೂತಿ ತಜ್ಞರಾದ ಡಾ.ನಿರ್ಮಲಾ ಮಹಾಬಲಶೆಟ್ಟಿ ಅವರು ಹೊಸ ತೆಲೆಮಾರಿನ ಎಲ್ಲಾ ವೈದ್ಯರುಗಳಿಗೆ ಮಾದರಿಯಾಗಿದ್ದಾರೆ ಎಂದರು.
ಐಎಂಎ ಮಾಜಿ ಅಧ್ಯಕ್ಷರುಗಳಾದ ಡಾ.ವಾಣಿ ಇರಕಲ್, ಡಾ. ಕವಿತಾ ಮಂಕಣಿ ಹಾಗೂ ಡಾ.ಪಲ್ಲವಿ ದೇಶಪಾಂಡೆ, ಹಿರಿಯ ತಜ್ಞರುಗಳಾದ ಡಾ.ವಿಜಯಾ ನಾಡಕರ್ಣಿ ಹಾಗೂ ಡಾ. ಸೌಭಾಗ್ಯ ಕುಲಕರ್ಣಿ ಅವರು ಡಾ.ನಿರ್ಮಲಾ ಮಹಾಬಲಶೆಟ್ಟಿ ಕುರಿತು ಅಭಿನಂದನಾಪರ ಮಾತನಾಡಿದರು.
ಡಾ.ಕಾತ್ಯಾಯಿನಿ ಪಾಟೀಲ ನಿರೂಪಿಸಿದರು. ಐಎಂಎ ಮಹಿಳಾ ವಿಭಾಗದ ಕಾರ್ಯದರ್ಶಿ ಡಾ.ಸ್ವಪ್ನಾ ವಂದಿಸಿದರು. ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳಾಗಿರುವ ಹಲವಾರು ಹಿರಿಯ ವೈದ್ಯರು ಪಾಲ್ಗೊಂಡಿದ್ದರು.

