ಉಪ್ಪಿನಬೆಟಗೇರಿ : ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಬಾಳೆಹೊನ್ನೂರಿನ ರಂಭಾಪುರಿ ಜಗದ್ಗುರು ಪೀಠದ ಶಾಖಾಮಠವಾಗಿರುವ ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮದ ಸಂಸ್ಥಾನ ಪಂಚಗೃಹ ಹಿರೇಮಠದ ನಿಕಟಪೂರ್ವ ಲಿಂಗೈಕ್ಯ ಪಟ್ಟಾಧ್ಯಕ್ಷರಾದ ಶ್ರೀಗುರುಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಲಿಂಗಾಂಗ ಸಾಮರಸ್ಯದ 90ನೆಯ ಪುಣ್ಯಾರಾಧನೆ ಜುಲೈ-16ರಂದು (ಆಷಾಢ ಶುದ್ಧ ದ್ವಿತಿಯಾ) ಗುರುವಾರ ಜರುಗಲಿದೆ.

ಶ್ರೀಮಠದ ಆವರಣದಲ್ಲಿರುವ ಲಿಂಗೈಕ್ಯ ಶ್ರೀಗುರುಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರ ಯೋಗಸಮಾಧಿಗೆ ಪುಣ್ಯಾರಾಧನೆಯ ಅಂಗವಾಗಿ ಪ್ರಾತ:ಕಾಲ ಏಕಾದಶ ಮಹಾರುದ್ರಾಭಿಷೇಕ, ಶಿವಾಷ್ಟೋತ್ತರ ಶತನಾಮಾವಳಿ, ನೂತನಾಂಬರ ಧಾರಣೆ, ಪುಷ್ಪಾಲಂಕಾರ, ಮಹಾಮಂಗಳಾರತಿ ಸೇರಿ ವಿಶೇಷ ಧಾರ್ಮಿಕ ಪೂಜಾ ಕೈಂಕರ್ಯಗಳು ಸಂಸ್ಥಾನ ಪಂಚಗೃಹ ಹಿರೇಮಠದ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳ ಹಾಗೂ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮಿಗಳ ನೇತೃತ್ವದಲ್ಲಿ ನಡೆಯಲಿವೆ.

ಇಷ್ಟಲಿಂಗ ತಪೋನುಷ್ಠಾನ : ಬಸವ ಪೂರ್ವ ಯುಗದಿಂದಲೂ ನಡೆದುಕೊಂಡು ಬಂದಿರುವ ಶ್ರೀಮಠದ ಪವಿತ್ರ ಗುರುಪರಂಪರೆಯಲ್ಲಿ ನಿಕಟಪೂರ್ವ ಗುರುವರ್ಯರಾದ ಲಿಂಗೈಕ್ಯ ಶ್ರೀಗುರುಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರು ತಮ್ಮ ಸನ್ಯಾಸದ ಒಟ್ಟು ಬದುಕನ್ನು ಇಷ್ಟಲಿಂಗ ತಪೋನುಷ್ಠಾನಕ್ಕೇ ಮೀಸಲಿಟ್ಟವರು. ಎಲ್ಲ ದ್ವಂದ್ವ-ವ್ಶೆರುಧ್ಯಗಳಿಂದ ಹೊರಬಂದು ತಮ್ಮದೇ ಆದ ಸರಳ ಸತ್ಯ-ಶುದ್ಧ ಜೀವನ ವಿಧಾನದ ಸೂಕ್ಷ್ಮ ಸಿದ್ಧಾಂತಗಳನ್ನು ರೂಢಿಸಿಕೊಂಡಿದ್ದರು. ಶ್ರೀಮಠದ ಸಮಸ್ತ ಭಕ್ತ ಗಣಕ್ಕೆ ಇಷ್ಟಲಿಂಗ ಮಹಾಪೂಜೆಯ ಘನತೆಯನ್ನು ಮನವರಿಕೆ ಮಾಡಿ, ತನ್ಮೂಲಕ ನಡೆಯುವ ಶಿವಯೋಗ ಸಾಧನೆಯಲ್ಲಿ ಬಯಲ ಬೆಳಗು ಕಾಣುವ ವಿಧಾನವನ್ನು ತಿಳಿಸಿ ಸಕಲರಿಗೂ ಸಾತ್ವಿಕ ಸಜ್ಜನಿಕೆಯ ಧಾರ್ಮಿಕ ಬದುಕಿಗೆ ಮಾರ್ಗದರ್ಶನ ಮಾಡಿದ್ದನ್ನು ಈಗಿನ 93 ವರ್ಷಗಳ ಹಿರಿಯ ಶ್ರೀಗಳಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿಯವರು ಅನನ್ಯ ಭಕ್ತಿಯಿಂದ ಸ್ಮರಣೆ ಮಾಡಿಕೊಳ್ಳುತ್ತಾರೆ.

ಅಮ್ಮಿನಬಾವಿ ಹಾಗೂ ಸುತ್ತಲಿನ ಗ್ರಾಮಗಳೂ ಸೇರಿದಂತೆ ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಭಕ್ತರೂ ಸಹ ಈ ಪುಣ್ಯಾರಾಧನೆಯಲ್ಲಿ ಪಾಲ್ಗೊಳ್ಳುವರು.

