ಒಮಾನ್ : ಒಮಾನ್ ಕರಾವಳಿ ತೀರದಲ್ಲಿ ಇರಾನ್ ಪಡೆಗಳು ನಡೆಸಿದ ಭೀಕರ ಕ್ಷಿಪಣಿ ದಾಳಿಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರ್ನೆ ಬಿಳಿಯೂರಿನ ಯುವಕನೊಬ್ಬ ಪಾರಾಗಿದ್ದಾರೆ. ದಾಳಿಗೆ ಒಳಗಾದ ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿಯನ್ನು ಸದ್ಯ ರಕ್ಷಿಸಲಾಗಿದ್ದು, ಇವರಲ್ಲಿ ಬಂಟ್ವಾಳದ ರಚನ್ ಪೂಜಾರಿ ಕೂಡ ಸೇರಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಜೆಎಫ್ ಎಸ್ ಗ್ಯಾಲಕ್ಸಿ’ ಮರ್ಚೆಂಟ್ ನೇವಿ ಹಡಗಿನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಚನ್ ಪೂಜಾರಿ ಅವರು ಭಾನುವಾರ ಮಧ್ಯರಾತ್ರಿ ಸುಮಾರು 2 ಗಂಟೆಯ ವೇಳೆಗೆ ಅವರಿದ್ದ ಹಡಗು ಯುಎಇ ಬಂದರಿನ ಕಡೆಗೆ ಪ್ರಯಾಣ ಬೆಳೆಸುತ್ತಿತ್ತು.ಹಡಗು ಭೂಭಾಗದಿಂದ ಕೇವಲ ಕೆಲವೇ ಕಿಲೋಮೀಟರ್ ದೂರದಲ್ಲಿದ್ದಾಗ ಇರಾನ್ ಪಡೆಗಳು ಹಡಗನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆಸಿವೆ. ಹಡಗು ಮುಂದೆ ಚಲಿಸದಂತೆ ತಡೆಯಲು ಇರಾನ್ ಪಡೆಗಳು ನೇರವಾಗಿ ಹಡಗಿನ ಎಂಜಿನ್ ಕೊಠಡಿಯನ್ನೇ ಗುರಿಯಾಗಿಸಿ ದಾಳಿ ನಡೆಸಿದ್ದವು. ಕ್ಷಿಪಣಿ ಅಪ್ಪಳಿಸುತ್ತಿದ್ದಂತೆ ಎಂಜಿನ್ ರೂಂನಲ್ಲಿ ಭಾರಿ ಪ್ರಮಾಣದ ಬೆಂಕಿ ಹೊತ್ತಿಕೊಂಡಿದೆ

ಕೂಡಲೇ ಹಡಗಿನಲ್ಲಿದ್ದ ಎಲ್ಲಾ ಸಿಬ್ಬಂದಿ ಸಮಯಪ್ರಜ್ಞೆ ಮೆರೆದಿದ್ದಾರೆ. ತಕ್ಷಣವೇ ಎಲ್ಲರೂ ಜೀವ ರಕ್ಷಕ ದೋಣಿಗೆ ಜಿಗಿದು ಹಡಗಿನಿಂದ ದೂರ ಸರಿದು ಪ್ರಾಣ ಉಳಿಸಿಕೊಂಡಿದ್ದಾರೆ. ಹಡಗಿನಲ್ಲಿದ್ದ ಸಿಬ್ಬಂದಿ ಒಮಾನ್ ನೌಕಾಪಡೆಯನ್ನು ಸಂಪರ್ಕಿಸಿ ನೆರವಿಗಾಗಿ ಕೋರಿದ್ದಾರೆ. ತಕ್ಷಣ ಕಾರ್ಯಾಚರಣೆಗೆ ಇಳಿದ ಒಮಾನ್ ನೌಕಾಪಡೆಯು ಸಮುದ್ರದ ಮಧ್ಯೆ ಸಿಲುಕಿದ್ದ ಎಲ್ಲಾ ಸಿಬ್ಬಂದಿಯನ್ನು ಸುರಕ್ಷಿತವಾಗಿ ರಕ್ಷಿಸಿ ತನ್ನ ಸೇನಾ ನೆಲೆಗೆ ಕರೆದೊಯ್ದಿದ್ದಾರೆ ಸದ್ಯ ರಚನ್ ಪೂಜಾರಿ ಸೇರಿದಂತೆ ಎಲ್ಲಾ ಸಿಬ್ಬಂದಿ ಒಮಾನ್ನಲ್ಲಿದ್ದು, ಹಡಗು ಕಂಪನಿಯ ಅಧಿಕಾರಿಗಳ ನೇರ ಮೇಲ್ವಿಚಾರಣೆ ಹಾಗೂ ಸುರಕ್ಷಿತ ಕಾವಲಿನಲ್ಲಿದ್ದಾರೆ

