ಮಂಗಳೂರು ಜು 17: ಅವಧಿ ಮೀರಿ ಕಾರ್ಯಾಚರಿಸುತ್ತಿರುವ ರಾಷ್ಟ್ರೀಯ ಹೆದ್ದಾರಿ 75ರ ಬಂಟ್ವಾಳ ತಾಲೂಕಿನ ಬ್ರಹ್ಮರಕೊಟ್ಲು ಟೋಲ್ ಗೇಟನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರ ನೇತೃತ್ವದ ನಿಯೋಗವು ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯನ್ನು ಭೇಟಿಯಾಗಿ ಮನವಿ ಸಲ್ಲಿಸಿದೆ.
ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಎಸ್ ಡಿಪಿಐ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ರವರು ಕಳೆದ 14 ವರ್ಷಗಳಿಂದ ವಾಹನ ಸವಾರರಿಂದ ನಿರಂತರವಾಗಿ ಟೋಲ್ ವಸೂಲು ಮಾಡುವ ಮೂಲಕ ಜಿಲ್ಲೆಯ ನಾಗರಿಕರನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಂಚಿಸುತ್ತಿದೆ ಎಂದರು.ಯಾವುದೇ ಮೂಲಭೂತ ಸೌಲಭ್ಯಗಳಿಲ್ಲದ ಕನಿಷ್ಠ ಪಕ್ಷ ಒಂದು ಶೌಚಾಲಯ ಕೂಡ ಇಲ್ಲದ ರಸ್ತೆಯಲ್ಲಿ ಹೆದ್ದಾರಿ ಪ್ರಾಧಿಕಾರದ ನಿಯಮಗಳನ್ನು ಗಾಳಿಗೆ ತೂರಿ ಟೋಲ್ ಸಂಗ್ರಹಿಸುತ್ತಿರುವುದು ಜಿಲ್ಲೆಯ ಜನಪ್ರತಿನಿಧಿಗಳ ಮತ್ತು ಸರಕಾರದ ಮೌನ ಮತ್ತು ನಿರ್ಲಕ್ಷದಿಂದ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು,

ಹದಿನಾಲ್ಕು ವರ್ಷಗಳ ಹಿಂದೆ ಬ್ರಹ್ಮರಕೊಟ್ಲು ಟೋಲ್ ಸಂಗ್ರಹ ಆರಂಭವಾದ ದಿನದಿಂದಲೇ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ನಿರಂತರವಾಗಿ ಇದರ ವಿರುದ್ಧ ಧ್ವನಿ ಎತ್ತಿಕೊಂಡು ಬರುತ್ತಿವೆ, ಇದೀಗ ಜಿಲ್ಲೆಯ ಹಲವಾರು ಪ್ರಗತಿಪರ ಸಂಘಟನೆಗಳು ಸಮಾನ ಮನಸ್ಕರು ಬಿಜೆಪಿ ಹೊರತುಪಡಿಸಿದ ರಾಜಕೀಯ ಪಕ್ಷಗಳು ಟೋಲ್ ವಿರುದ್ಧ ಹೋರಾಟ ನಡೆಸುತ್ತಿದೆ,ಆದರೂ ಕೇಂದ್ರ ಸರಕಾರ ಮತ್ತು ದಕ್ಷಿಣ ಕನ್ನಡದ ಸಂಸದರು ಈ ಬಗ್ಗೆ ಚಕಾರವೆತ್ತದಿರುವುದು ಆಶ್ಚರ್ಯವನ್ನುಂಟು ಮಾಡುತ್ತಿದೆ, ಅಸಮರ್ಪಕ ಟೋಲ್ ತೆರವುಗೊಳಿಸಲು ಒತ್ತಾಯಿಸಿ ಎಸ್ ಡಿ ಪಿ ಐ ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸುವ ಮೂಲಕ ಎರಡನೇ ಹಂತದ ಹೋರಾಟಕ್ಕೆ ಧುಮುಕಿದೆ ಸರಕಾರ ಮತ್ತು ರಾಷ್ಟ್ರೀಯ ಹೆದ್ದಾಗಿ ಪ್ರಾಧಿಕಾರ ಕೂಡಲೇ ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿ ಬ್ರಹ್ಮರಕೂಟ್ಲು ಟೋಲ್ ಗೇಟ್ ಶಾಶ್ವತವಾಗಿ ಮುಚ್ಚಲು ಸೂಕ್ತ ಕ್ರಮವನ್ನು ಕೈಗೊಳ್ಳಬೇಕು ಎಂದು ಹೇಳಿದರು,
ಈ ವಿಷಯದಲ್ಲಿ ಮುಂದಿನ ಹೋರಾಟಗಳನ್ನು ಪಕ್ಷವು ಹಂತ ಹಂತವಾಗಿ ನಡೆಸಲು ಉದ್ದೇಶಿಸಿದೆ ಅದರ ಭಾಗವಾಗಿ ಆಗಸ್ಟ್ ತಿಂಗಳಲ್ಲಿ ಬಿಸಿ ರೋಡಿನಿಂದ ಜಿಲ್ಲಾಧಿಕಾರಿ ಕಚೇರಿಗೆ ಡಿಸಿ ಕಚೇರಿ ಚಲೋ ಎಂಬ ಬೃಹತ್ ಜಾಥವನ್ನು ಸಂಘಟಿಸಲಿದ್ದೇವೆ, ಇದಕ್ಕೆ ಜಿಲ್ಲೆಯ ಸರ್ವ ನಾಗರಿಕರು ಪಕ್ಷಬೇಧ ಜಾತಿಭೇದ ಮರೆತು ಸಹಕರಿಸಬೇಕೆಂದು ಈ ಸಂದರ್ಭದಲ್ಲಿ ಮನವಿ ಮಾಡಿದರು
ಜಿಲ್ಲಾಧಿಕಾರಿಯನ್ನು ಭೇಟಿಯಾದ ನಿಯೋಗದಲ್ಲಿ ಎಸ್ ಡಿಪಿಐ ಜಿಲ್ಲಾ ಕಾರ್ಯದರ್ಶಿಗಳಾದ ಅಶ್ರಫ್ ತಲಪಾಡಿ, ಹಾಗೂ ಶಾಕಿರ್ ಅಳಕೆಮಜಲು ಜಿಲ್ಲಾ ಮುಖಂಡರಾದ ರಹೀಮ್ ಇಂಜಿನಿಯರ್, ನ್ಯಾಯವಾದಿ ಕಬೀರ್ ಕೆಮ್ಮಾರ, ಹನೀಫ್ ಪುಂಜಾಲಕಟ್ಟೆ, ಶಾಹುಲ್ ಹಮೀದ್ ಎಸ್.ಎಚ್ ಹಾಗೂ ಇತರರು ಉಪಸ್ಥಿತರಿದ್ದರು.

