ಬಂಟ್ವಾಳ : ಬಂಟ್ವಾಳ ತಾಲೂಕಿನ ಬಿ.ಸಿ.ರೋಡಿನ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ 6 ಗಂಟೆ ಸುಮಾರಿಗೆ ಯುವತಿಯೊಬ್ಬಳನ್ನು ಆಕೆಯ ದೂರದ ಸಂಬಂಧಿ ಎಂದು ಹೇಳಲಾದ ವ್ಯಕ್ತಿಯೊಬ್ಬ ಸಾರ್ವಜನಿಕರ ಎದುರೇ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾರೆ.

ಕಕ್ಯಪದವು ಸಮೀಪದ ಕೊಡಂಗೆಯ ನಿವಾಸಿ ಬಾಳಪ್ಪ ಗೌಡ ಎಂಬವರ ಪುತ್ರಿ ಲಾವಣ್ಯ (25 ವರ್ಷ) ಹತ್ಯೆಯಾದ ಯುವತಿ. ಆಕೆ ಕಲ್ಲಡ್ಕದ ಖಾಸಗಿ ಆಸ್ಪತ್ರೆಯೊಂದರಲ್ಲಿ ಶುಶ್ರೂಷಿಯಾಗಿ ಕೆಲಸ ಮಾಡುತ್ತಿದ್ದರು.

ಕೆಲಸ ಮುಗಿಸಿ ಮನೆಗೆ ಮರಳುವ ಸಲುವಾಗಿ ಯುವತಿ ಬಿ.ಸಿ.ರೋಡಿನ ಕೆಎಸ್ಆರ್ಟಿಸಿ ಬಸ್ನಿಲ್ದಾಣದಲ್ಲಿ ಕಕ್ಯಪದವಿಗೆ ಹೋಗುವ ಬಸ್ ಹತ್ತಿದ್ದಾರೆ. ಆ ಸಂಧರ್ಭದಲ್ಲಿ ಆರೋಪಿ ಐ10 ಕಾರಿನಲ್ಲಿ ಬಸ್ನಿಲ್ದಾಣದ ಬಳಿ ಆಕೆಗಾಗಿ ಕಾಯುತ್ತಿದ್ದ. ಆಕೆ ಸೀಟೊಂದರಲ್ಲಿ ಕುಳಿತಿದ್ದಾಗ ಬಸ್ ಹತ್ತಿದ್ದ ಆರೋಪಿ ಬ್ಯಾಗಿನಿಂದ ತಲವಾರು ತೆಗೆದಿದ್ದ. ಅದನ್ನು ನೋಡಿ ಯುವತಿ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಳು. ಅವಳನ್ನು ಬೆನ್ನಟ್ಟಿದ ಯುವಕ, ಬಸ್ನಿಲ್ದಾಣದಲ್ಲಿ ಸಾರ್ವಜನಿಕರ ಎದುರೇ ಆಕೆಯ ಕುತ್ತಿಗೆಯ ಹಿಂಭಾಗಕ್ಕೆ ತಲವಾರಿನಿಂದ ಕಡಿದಿದ್ದ. ಸ್ವಲ್ಪ ದೂರ ಓಡುತ್ತಲೇ ಕುಸಿದು ಬಿದ್ದಿದ್ದ ಆಕೆಯ ಮೇಲೆ ಪದೇ ಪದೇ ತಲವಾರಿನಿಂದ ದಾಳಿ ನಡೆಸಿ ಕೃತ್ಯಕ್ಕೆ ಬಳಸಿದ್ದ ತಲವಾರನ್ನು ಅಲ್ಲೇ ಎಸೆದು ಅಲ್ಲಿಂದ ಕಾರಿನಲ್ಲಿ ಪರಾರಿಯಾಗಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ತಕ್ಷಣವೇ ಸಾರ್ವಜನಿಕರು ಬಂಟ್ವಾಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು.

ಚೇತನ್ ಯುವತಿಯನ್ನು ಹತ್ಯೆ ಮಾಡಿದ ಆರೋಪಿ. ಆತ ಯುವತಿಯ ದೂರದ ಸಂಬಂಧಿ. ಆತ ಯುವತಿಯನ್ನು ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.

ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ಡಾ.ಅರುಣ್. ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಎಎಸ್ಪಿ ಯಶ್ ಕುಮಾರ್ ಶರ್ಮ, ಬಂಟ್ವಾಳ ನಗರ ಠಾಣೆಯ ಇನ್ಸ್ಪೆಕ್ಟರ್ ಅನಂತ ಪದ್ಮನಾಭ, ಪಿಎಸ್ಐ ಸಂದೀಪ್ ಶೆಟ್ಟಿ, ಸಂಚಾರ ಠಾಣೆಯ ಪಿಎಸ್ಐ ಆದರ್ಶ್ ಸ್ಥಳಕ್ಕೆ ಭೇಟಿ ನೀಡಿದ್ದಾರೆ.

