ಮಂಗಳೂರು:ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಭಾರತೀಯ ಭಾಷಾ ವಿಭಾಗಗಳನ್ನು ನಿರ್ಲಕ್ಷ್ಯ ಮಾಡಿ, ತುಳು, ಕೊಂಕಣಿ ಹಾಗೂ ಹಿಂದಿ ಸ್ನಾತಕೋತ್ತರ ವಿಭಾಗಗಳನ್ನು ಹಂತ ಹಂತವಾಗಿ ಮುಚ್ಚುತ್ತಿರುವ ಕ್ರಮವನ್ನು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಖಂಡಿಸಿದೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಲತೇಶ್ ಬಾಕ್ರಬೈಲು, ವಿಭಾಗಗಳನ್ನು ನಗರದಿಂದ ದೂರದ ವಿಶ್ವವಿದ್ಯಾನಿಲಯ ಆವರಣಕ್ಕೆ ಸ್ಥಳಾಂತರಿಸಿರುವುದರಿಂದ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ ಎಂದು ಹೇಳಿದರು. ಒಡಿಯೂರು ಶ್ರೀಗುರುದೇವ ದತ್ತ ಸಂಸ್ಥಾನದ ಸಹಯೋಗದಲ್ಲಿ ಆರಂಭಗೊಂಡಿದ್ದ ತುಳು ಅಧ್ಯಯನ ಕೇಂದ್ರವನ್ನು ಮುಚ್ಚಿರುವುದು ಕರಾವಳಿಯ ಮಾತೃಭಾಷೆ ತುಳುವಿಗೆ ಮಾಡಿದ ಅವಮಾನವಾಗಿದ್ದು, ಮಂಗಳೂರು ವಿವಿಯಲ್ಲೇ ತುಳುವಿಗೆ ಉಳಿವಿಲ್ಲದಂತಾಗಿದೆ ಎಂದು ಅವರು ಆರೋಪಿಸಿದರು.

ಭಾರತೀಯ ಭಾಷೆಗಳ ಬೆಳವಣಿಗೆಗೆ ಧಕ್ಕೆಯಾಗುವ ಇಂತಹ ಕ್ರಮಗಳನ್ನು ಕೈಬಿಟ್ಟು, ಮುಚ್ಚಿರುವ ಸ್ನಾತಕೋತ್ತರ ವಿಭಾಗಗಳನ್ನು ತಕ್ಷಣ ಪುನರಾರಂಭಿಸಬೇಕು. ಭಾರತೀಯ ಭಾಷೆಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗೆ ವಿದ್ಯಾರ್ಥಿ ಸ್ನೇಹಿ ನೀತಿಗಳನ್ನು ಜಾರಿಗೊಳಿಸಬೇಕು ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಆಗ್ರಹಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ನ ಪದಾಧಿಕಾರಿಗಳಾದ ಗೀತಾ ಲಕ್ಷ್ಮೀಶ್, ಡಾ.ಸುರೇಶ್ ನೆಗಳಗುಲಿ ಹಾಗೂ ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.

