‘
ಧಾರವಾಡ : ಶಿಕ್ಷಕರು ಪ್ರತೀ ತರಗತಿಯ ಪಠ್ಯಕ್ರಮದ ವಿಷಯಗಳನ್ನು ಅರಿತು ಬೋಧಿಸಿದರೆ ಮಕ್ಕಳ ಕಲಿಕೆ ಅರ್ಥಪೂರ್ಣವಾಗುತ್ತದೆ ಎಂದು ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಕಿರಿಯ ಶ್ರೀಗಳಾದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಅವರು ಶನಿವಾರ ತಮ್ಮ ಶ್ರೀಮಠದ ಶ್ರೀಮತಿ ಸುಶಿಲಾತಾಯಿ ಹಿರೇಮಠ ಕನ್ನಡ ಪ್ರಾಥಮಿಕ ಶಾಲೆಯಲ್ಲಿ ಹುಬ್ಬಳ್ಳಿಯ ದೇಶಪಾಂಡೆ ಪ್ರತಿಷ್ಠಾನದ ‘ಅರ್ಲಿಸ್ಪಾರ್ಕ’ ಯೋಜನೆಯಡಿ ಖಾಸಗಿ ಪ್ರಾಥಮಿಕ ಶಾಲಾ ಶಿಕ್ಷಕರಿಗಾಗಿ ಹಮ್ಮಿಕೊಂಡಿರುವ ಆಂಗ್ಲಭಾಷಾ ಬೋಧನೆಯ ಉಚಿತ ಸರಣಿ ತರಬೇತಿ ಶಿಬಿರಗಳನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಶಾಲಾ ತರಗತಿಗಳಲ್ಲಿ ದೇಶದ ಭವಿಷ್ಯ ನಿರ್ಮಾಣವಾಗುತ್ತದೆ. ಶಿಕ್ಷಕರ ನಿಜವಾದ ಯಶಸ್ಸು ವಿದ್ಯಾರ್ಥಿಯ ಅಂಕಗಳಲ್ಲಿ ಅಲ್ಲ, ಅವನ ವ್ಯಕ್ತಿತ್ವ ಮತ್ತು ಜೀವನದ ಸಾಧನೆಯಲ್ಲಿ ಎದ್ದುಕಾಣುತ್ತದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಚಿಕ್ಕಮಗಳೂರು ಜಿಲ್ಲೆ ಬೇರುಗಂಡಿ ಬೃಹನ್ಮಠದ ಶ್ರೀರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬೋಧನೆ ಎಂದರೆ ಕೇವಲ ಪಾಠ ಹೇಳುವುದಲ್ಲ; ವಿದ್ಯಾರ್ಥಿಗಳಿಗೆ ಕಲಿಕಾ ವಿಷಯಗಳನ್ನು ಅರ್ಥ ಮಾಡಿಸುವುದು. ಮಕ್ಕಳು ಮುಕ್ತವಾಗಿ ಪ್ರಶ್ನೆ ಕೇಳಿ ಆಸಕ್ತಿಯಿಂದ ಕಲಿಯುವಂತೆ ಶಿಕ್ಷಕರ ಬೋಧನೆ ಹಿತವಾಗಿರಬೇಕು ಎಂದರು.

ಇನ್ನೋರ್ವ ಅತಿಥಿಯಾಗಿದ್ದ ಹವ್ಯಾಸೀ ಪತ್ರಕರ್ತ ಗುರುಮೂರ್ತಿ ಯರಗಂಬಳಿಮಠ ಮಾತನಾಡಿ, ಶಿಕ್ಷಕರು ಸದಾ ವಿದ್ಯಾರ್ಥಿಯಾಗಿ ಹೊಸ ವಿಷಯಗಳ ಆಸ್ವಾದನೆಗೆ ತೆರೆದುಕೊಂಡಾಗ ತರಗತಿಗಳಲ್ಲಿ ಪರಿಣಾಮಕಾರಿ ಬೋಧನೆ ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳ ಕಲಿಕೆ ಸಾರ್ಥಕಗೊಳ್ಳುವಂತೆ ಶಿಕ್ಷಕರಿಗೆ ಅಗತ್ಯವಾದ ಸರಣಿ ತರಬೇತಿಗಳನ್ನು ಉಚಿತವಾಗಿ ನೀಡುತ್ತಿರುವ ಹುಬ್ಬಳ್ಳಿಯ ದೇಶಪಾಂಡೆ ಪ್ರತಿಷ್ಠಾನದ ಸೇವೆ ಶ್ಲ್ಯಾಘನೀಯವಾಗಿದೆ ಎಂದು ಹೇಳಿದರು.
ದೇಶಪಾಂಡೆ ಪ್ರತಿಷ್ಠಾನದ ತರಬೇತುದಾರರಾದ ಪುಷ್ಪಲತಾ ಕುರಗೋಡ ಹಾಗೂ ದಾನಮ್ಮ ಕರ್ಲವಾಡ ತರಬೇತಿ ನೀಡಿದರು. ಶಾಲೆಯ ಮುಖ್ಯಾಧ್ಯಾಪಕಿ ಮಂಜುಳಾ ದೊಡಮನಿ, ವಿವಿಧ ವಿಷಯಗಳ ಶಿಕ್ಷಕರುಗಳಾದ ಟಿ.ಎಂ.ದೇಸಾಯಿ, ಎಂ.ಎನ್. ಆಲದಕಟ್ಟಿ, ಎಂ.ಆ0ಜನೇಯ, ವಿನಾಯಕ ಹಿರೇಮಠ, ಲೀಲಾವತಿ ಅಣ್ಣಿಗೇರಿ, ಮಹೇಶ್ವರಿ ಚಿಕ್ಕಮಠ, ವಿಜಯಲಕ್ಷಿö್ಮ ಇದ್ಲಿ, ಜ್ಯೋತಿ ವಿಠ್ಠೋಜಿ, ಸರಿತಾ ಸುಣಗಾರ, ಆರತಿ ಹರಿಜನ, ರಕ್ಷಿತಾ ಶಿರಗುಪ್ಪಿ, ಸವಿತಾ ಅಕ್ಕೋಜಿ, ಪವಿತ್ರಾ ಯರಗಂಬಳಿಮಠ ತರಬೇತಿ ಶಿಬಿರದಲ್ಲಿ ಇದ್ದರು. ಶನಿವಾರ ಶಾಲಾ ಅವಧಿಯ ನಂತರ ಈ ಸರಣಿ ತರಬೇತಿಗಳು ಜರುಗುತ್ತಿರುವುದು ಇಲ್ಲಿಯ ವಿಶೇಷ.

