ಧಾರವಾಡ : ಬೋಧನಾ ವೃತ್ತಿಗೆ ಪೂರಕವಾದ ಸರಳ ಸಜ್ಜನಿಕೆಯ ವ್ಯಕ್ತಿತ್ವದೊಂದಿಗೆ ಕ್ರಿಯಾಪ್ರೇರಕ ಬೋಧನೆಯನ್ನು ರೂಢಿಸಿಕೊಂಡಿದ್ದ ಆರ್.ಸಿ.ಹಿರೇಮಠ ಅವರು ವಿದ್ಯಾರ್ಥಿಗಳು ಮೆಚ್ಚಿದ ಆದರ್ಶ ಶಿಕ್ಷಕರಾಗಿದ್ದಾರೆ ಎಂದು ಕಲಘಟಗಿ ತಾಲೂಕಿನ ಗಳಗಿಹುಲಕೊಪ್ಪ ಗ್ರಾಮದ ಸರಕಾರಿ ಪ್ರೌಢ ಶಾಲೆಯ ಮುಖ್ಯಾಧ್ಯಾಪಕಿ ಶಾಂತಾ ಮೀಸಿ ಹೇಳಿದರು.

ಅವರು ಇತ್ತೀಚೆಗೆ ನಿವೃತ್ತಿ ಹೊಂದಿದ ತಮ್ಮ ಶಾಲೆಯ ಸಹ ಶಿಕ್ಷಕ ಆರ್.ಸಿ. ಹಿರೇಮಠ ಅವರ ಅಭಿನಂದನಾ ಬೀಳ್ಕೊಡುವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ವಿಷಯ ಪ್ರಭುತ್ವದೊಂದಿಗೆ ಆಕರ್ಷಕ ಹೃದ್ಯ ಬೋಧನೆಯನ್ನು ಕರಗತ ಮಾಡಿಕೊಂಡಿದ್ದ ಹಿರೇಮಠ ಅವರು ವಹಿಸಿಕೊಟ್ಟ ಶಾಲಾ ಕೈಂಕರ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಜಾಳ್ಮೆಯನ್ನೂ ಹೊಂದಿದ್ದರು ಎಂದರು.

ಇನ್ನೋರ್ವ ಅತಿಥಿಯಾಗಿದ್ದ ವಿಶ್ರಾಂತ ಹಿರಿಯ ಅಧ್ಯಾಪಕ ಆರ್.ವಿ. ಪತ್ತಾರ ಮಾತನಾಡಿ, ವಿದ್ಯಾರ್ಥಿ ಹಂತದಿAದಲೂ ಕ್ರಿಯಾಶೀಲ ವ್ಯಕ್ತಿತ್ವ, ಶಿಸ್ತಿನ ಜೀವನ ವಿಧಾನ ಹಾಗೂ ಸಮಯ ಪ್ರಜ್ಞೆ ಬೆಳೆಸಿಕೊಂಡಿದ್ದ ಪ್ರೀತಿಯ ಶಿಷ್ಯ ಆರ್.ಸಿ. ಹಿರೇಮಠ ಪ್ರಸ್ತುತ ತಾನು ಸ್ವೀಕರಿಸಿದ್ದ ಶಿಕ್ಷಕ ವೃತ್ತಿಯನ್ನು ಸುದೀರ್ಘ 41 ವರ್ಷಗಳ ಕಾಲ ಅತ್ಯಂತ ಸಮರ್ಥವಾಗಿ ನಿರ್ವಹಿಸಿ ಶಿಕ್ಷಣ ಇಲಾಖೆಯಿಂದ ವಿವಿಧ ಪ್ರಶಸ್ತಿ-ಪುರಸ್ಕಾರಗಳಿಗೆ ಭಾಜನವಾಗಿರುವುದು ತಮ್ಮೊಳಗೆ ಹೆಮ್ಮೆ ತಂದಿದೆ ಎಂದು ಶುಭಹಾರೈಸಿದರು.

ನಿವೃತ್ತ ಪ್ರಾಚಾರ್ಯರುಗಳಾದ ಪ್ರೊ.ಎಂ.ಎನ್.ಸಿಂಗನಂಳ್ಳಿ, ಪ್ರೊ.ಸಿ.ಎಸ್.ಹಿರೇಮಠ, ನಿವೃತ್ತ ಉಪನ್ಯಾಸಕ ಎಸ್.ಪಿ. ಸುವರ್ಣಕರ, ನಿವೃತ್ತ ಮುಖ್ಯಾಧ್ಯಾಪಕ ಎನ್.ಜಿ.ಭಟ್ಟ, ಪ.ಪೂ.ಕಾಲೇಜು ಪ್ರಾಚಾರ್ಯ ಆರ್.ಜೆ.ಲಮಾಣಿ, ಎಂ.ಬಿ. ತಡಸಮಠ, ಎಂ.ಬಿ. ಮಠಪತಿ, ಬಿ.ಕೆ.ಪಾಟೀಲ, ಮಾನಪ್ಪ ಶಿಂಗನಳ್ಳಿ, ಆರ್.ಬಿ.ಚವ್ಹಾಣ, ಜಿ. ಎಸ್.ಚರಂತಿಮಠ ಪಾಲ್ಗೊಂಡಿದ್ದರು.

ಮೊದಲು ಗುರುವಂದನೆ : ಬೀಳ್ಕೊಡುಗೆಯ ಸನ್ಮಾನ ಸ್ವೀಕರಿಸುವುದಕ್ಕಿಂತ ಮೊದಲು ಆರ್.ಸಿ.ಹಿರೇಮಠ ಅವರು ತಮಗೆ ಕಲಿಸಿದ ಗುರುವರ್ಯರನ್ನು ಗೌರವಿಸಿ ಅಭಿವಂದಿಸಿದರು. ನಂತರ ಸಹೋದ್ಯೋಗಿ ಮಿತ್ರರು, ಎಸ್.ಡಿ.ಎಂ.ಸಿ. ಅಧ್ಯಕ್ಷರು, ಸದಸ್ಯರು, ಗ್ರಾಮದ ವಿವಿಧ ಕ್ಷೇತ್ರಗಳ ಗಣ್ಯರು, ಗ್ರಾ.ಪಂ. ಮಾಜಿ ಸದಸ್ಯರು, ನೂರಾರು ವಿದ್ಯಾರ್ಥಿಗಳು, ಹಲವಾರು ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಆರ್.ಸಿ. ಹಿರೇಮಠ ಹಾಗೂ ಅವರ ಧರ್ಮಪತ್ನಿ ದಾಕ್ಷಾಯಿಣಿ ಅವರನ್ನು ಗೌರವಿಸಿದರು.
ಶಿಕ್ಷಕ ಸಿ.ಸಿ.ಹಿರೇಮಠ ಸ್ವಾಗತಿಸಿದರು. ನಿಂಗಪ್ಪ ಬ್ಯಾಹಟ್ಟಿಹಾಗೂ ಎಂ.ವೈ.ಕಬ್ಬರ ನಿರೂಪಿಸಿದರು. ಅಭಿಷೇಕ ರಾಯಕೊಪ್ಪ ವಂದಿಸಿದರು.

