ಧಾರವಾಡ : ಶಾಲಾ ಸಂಸತ್ತಿನ ನಾಯಕತ್ವವಹಿಸುtವ ವಿದ್ಯಾರ್ಥಿಗಳು ಭಾರತೀಯ ಪ್ರಜಾಪ್ರಭುತ್ವದ ಯಶಸ್ಸಿಗೆ ಬೆಳಕು ತೋರುವ ನಮ್ಮ ಸಂವಿಧಾನದ ಘನತೆಯನ್ನು ಅರಿಯಬೇಕೆಂದು ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಬಸವರಾಜ ಕರಲಿಂಗಣ್ಣವರ ಕರೆ ನೀಡಿದರು. ಅವರು ಶನಿವಾರ ಇಲ್ಲಿಯ ಕಮಲಾಪುರದ ವಿದ್ಯಾಚೇತನ ಶಿಕ್ಷಣ ಸಮಿತಿಯ ಜ್ಞಾನಜ್ಯೋತಿ ವಿದ್ಯಾಲಯದ ಪ್ರಸಕ್ತ ಸಾಲಿನ ವಿದ್ಯಾರ್ಥಿ ಸಚಿವ ಸಂಪುಟದ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು. ಶಾಲಾ ಸಂಸತ್ತಿಗೆ ಆಯ್ಕೆಗೊಂಡ ವಿದ್ಯಾರ್ಥಿಗಳು ಸಮಯ ಪ್ರಜ್ಞೆ, ನಾಯಕತ್ವದ ಜವಾಬ್ದಾರಿ, ಶಿಸ್ತು ಹಾಗೂ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಶಹರ ಬಿಇಓ ಕಚೇರಿಯ ಶಿಕ್ಷಣ ಸಂಯೋಜಕ ಬಸವರಾಜ ಚಿಕ್ಕೂರ ಮಾತನಾಡಿ, ಸಂವಿಧಾನದ ಜನಪರ ಮೌಲಿಕ ವಿಚಾರಗಳನ್ನು ವಿದ್ಯಾರ್ಥಿಗಳು ಮನವರಿಕೆ ಮಾಡಿಕೊಳ್ಳಬೇಕು ಎಂದರು.

ವಿದ್ಯಾಚೇತನ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಟಿ. ಹಿರೇಮಠ ಮಾತನಾಡಿ, ಕಳೆದ ವರ್ಷ ಸಂಸ್ಥೆಯ ಪ್ರೌಢಶಾಲೆ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ಸಾಧನೆಗೆ ನಮ್ಮ ಶಿಕ್ಷಕರು ವ್ಯಾಪಕ ಶ್ರಮಿಸಿದ್ದಾರೆ ಎಂದರು. ವಿಶೇಷ ಅತಿಥಿ ಜ್ಞಾನಜ್ಯೋತಿ ಐಟಿಐ ಪ್ರಾಚಾರ್ಯ ಅಬ್ಬಾಸ್ ಸದರ್ಭಾಯಿ ಮಾತನಾಡಿದರು.

ಶಾಲೆಯ ಮುಖ್ಯಾಧ್ಯಾಪಕಿ ಗಿರಿಜಾ ಹೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಿಯಾ ಶೋಬನದ ಸ್ವಾಗತಿಸಿದರು. ಸೀಮಾ ತಿಳವಳ್ಳಿ ನಿರೂಪಿಸಿದರು. ಉಮಾ ಟಿಕ್ಕುಂಡಿ ವಂದಿಸಿದರು. ಶಾಲೆಯ ನೂತನ ವಿದ್ಯಾರ್ಥಿ ಸಚಿವ ಸಂಪುಟದ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದರು. ಅತಿಥಿಗಳು ಧ್ವಜ ನೀಡಿ ಪ್ರಮಾಣವಚನ ಬೋಧಿಸಿದರು.


