ಮಂಗಳೂರು : ಜುಲೈ 29ರಂದು ಕೆನರಾ ನಂದಗೋಕುಲ ಶಾಲೆಯ ವತಿಯಿಂದ ಸುಧೀಂದ್ರ ಸಭಾಭವನದಲ್ಲಿ ಗುರುಪೂರ್ಣಿಮೆಯನ್ನು ಪೋಷಕರ ಸಮ್ಮುಖದಲ್ಲಿ ಆಚರಿಸಲಾಯಿತು. ಭಾರತೀಯ ಸಂಸ್ಕೃತಿಯಲ್ಲಿ ಗುರು ಮತ್ತು ತಂದೆ-ತಾಯಿಗೆ ಇರುವ ಶ್ರೇಷ್ಠ ಸ್ಥಾನವನ್ನು ಸ್ಮರಿಸುವ ಈ ಕಾರ್ಯಕ್ರಮ ಎಲ್ಲರ ಮನಸ್ಸನ್ನು ತಟ್ಟುವಂತಿತ್ತು.
ಕಾರ್ಯಕ್ರಮವನ್ನು ಶ್ರೀಮತಿ ಸವಿತಾ ನಿರೂಪಿಸಿದರು. ಪುಟಾಣಿಗಳು ಶ್ಲೋಕ ಪಠಣ , ಗುರುಪೂರ್ಣಿಮೆ ಹಾಗೂ ವ್ಯಾಸಪೂರ್ಣಿಮೆಯ ಮಹತ್ವವನ್ನು ತಮ್ಮ ಮುಗ್ಧ ಮಾತುಗಳಲ್ಲಿ ವಿವರಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಗಾಯತ್ರಿ ಹಾಗೂ ಪ್ರತಿಮಾ ಅವರು ನಡೆಸಿಕೊಟ್ಟ ರಸಪ್ರಶ್ನೆ ಮತ್ತು ಸಂವಾದಾತ್ಮಕ ಚಟುವಟಿಕೆ ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹಾಗೂ ಭಾಷೆಯ ಮೇಲಿನ ಪ್ರೀತಿಯನ್ನು ಹೆಚ್ಚಿಸಿತು.
ಕಾರ್ಯಕ್ರಮದ ಅತ್ಯಂತ ಹೃದಯಸ್ಪರ್ಶಿ ಕ್ಷಣವೆಂದರೆ ಪಾದಪೂಜೆ. ಮುಖ್ಯೋಪಾಧ್ಯಾಯಿನಿ ಶ್ರೀಮತಿ ಉಜ್ವಲ್ ಮಲ್ಯ ಅವರ ಮಾರ್ಗದರ್ಶನದಲ್ಲಿ ಮಕ್ಕಳು ತಮ್ಮ ತಂದೆ-ತಾಯಿಯ ಪಾದಗಳಿಗೆ ಹೂಗಳನ್ನು ಅರ್ಪಿಸಿ, ಕೃತಜ್ಞತೆಯಿಂದ ನಮಸ್ಕರಿಸಿದರು. ಆ ಕ್ಷಣದಲ್ಲಿ ಅನೇಕ ಪೋಷಕರ ಕಣ್ಣುಗಳು ಸಂತೋಷದ ಕಣ್ಣೀರಿನಿಂದ ತುಂಬಿದವು. ಮಕ್ಕಳ ಪ್ರೀತಿಯ ಸ್ಪರ್ಶದಲ್ಲಿ ಪೋಷಕರ ತ್ಯಾಗ, ಪ್ರೀತಿ ಮತ್ತು ಆಶೀರ್ವಾದದ ಮಹತ್ವ ಎಲ್ಲರ ಹೃದಯವನ್ನು ತಟ್ಟಿತು.
“ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯದೇವೋ ಭವ” ಎಂಬ ಭಾರತೀಯ ಸಂಸ್ಕೃತಿಯ ಶಾಶ್ವತ ಸಂದೇಶವನ್ನು ಮಕ್ಕಳ ಮನಸ್ಸಿನಲ್ಲಿ ಬಿತ್ತುವ ಸುಂದರ ಪ್ರಯತ್ನ ಈ ಕಾರ್ಯಕ್ರಮವಾಗಿತ್ತು. ಮಹರ್ಷಿ ವೇದವ್ಯಾಸರ ಜ್ಞಾನಸಂಪತ್ತನ್ನು ಸ್ಮರಿಸುತ್ತಾ, ಗುರುಗಳ ಹಾಗೂ ಪೋಷಕರ ಬಗ್ಗೆ ಗೌರವ, ವಿನಯ, ಕೃತಜ್ಞತೆ ಮತ್ತು ಉತ್ತಮ ಸಂಸ್ಕಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪವನ್ನು ಮಕ್ಕಳು ವ್ಯಕ್ತಪಡಿಸಿದರು.
ಕೊನೆಯಲ್ಲಿ ಶ್ರೀಮತಿ ಭಾಗ್ಯ ಅವರು ವಂದನಾರ್ಪಣೆ ಸಲ್ಲಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಪೋಷಕರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು. ಗುರುಪೂರ್ಣಿಮೆಯ ಈ ಆಚರಣೆ ಪ್ರತಿಯೊಬ್ಬರ ಹೃದಯದಲ್ಲಿ ಅಳಿಸಲಾಗದ ಮಧುರ ನೆನಪಾಗಿ ಉಳಿಯಿತು.

