ಮಂಗಳೂರು, ಜು.29: ಸಂಸ್ಕಾರ, ಗುರುಭಕ್ತಿ ಮತ್ತು ಕೃತಜ್ಞತೆಯ ಮಹತ್ವವನ್ನು ಸಾರುವ ಗುರುಪೂರ್ಣಿಮಾ ಕಾರ್ಯಕ್ರಮವನ್ನು ಕೆನರಾ ಇಂಟರ್ನ್ಯಾಷನಲ್ ಶಾಲೆಯಲ್ಲಿ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮವು ಪ್ರಾರ್ಥನೆ ಹಾಗೂ ದೀಪ ಪ್ರಜ್ವಲನೆಯೊಂದಿಗೆ ಆರಂಭಗೊಂಡಿತು. ಬಳಿಕ ಮಕ್ಕಳಿಂದ ತಾಯಂದಿರಿಗೆ ಸಮರ್ಪಿತವಾದ ಮನಮೋಹಕ ನೃತ್ಯ, ಕಥಾ ನಿರೂಪಣೆ, ಭಜನೆಗಳು ಹಾಗೂ ಶ್ರೀಕೃಷ್ಣ ಪೂಜೆಯು ಕಾರ್ಯಕ್ರಮಕ್ಕೆ ಆಧ್ಯಾತ್ಮಿಕ ಮೆರುಗು ನೀಡಿದವು.
ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ತೃಪ್ತಿ ರೈ ಅವರು ಮಾತನಾಡಿ, “ತಾಯಿಯೇ ಮಗುವಿನ ಮೊದಲ ಗುರು” ಎಂಬ ಸತ್ಯವನ್ನು ವಿವರಿಸಿದರು. ತಾಯಿಯ ಪ್ರೀತಿ, ತ್ಯಾಗ, ಕಾಳಜಿ ಮತ್ತು ಮಾರ್ಗದರ್ಶನವು ಮಗುವಿನ ಜೀವನ ರೂಪಿಸುವಲ್ಲಿ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಶಾಲೆಯ ಶೈಕ್ಷಣಿಕ ವಿಭಾಗದ ಮುಖ್ಯಸ್ಥೆ ಶ್ರೀಮತಿ ಉಜ್ವಲ್ ಮಲ್ಯ ಅವರು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದ್ದ ಮಾತೃಪೂಜೆಯನ್ನು ಮಕ್ಕಳು ಶ್ರದ್ಧಾ ಭಕ್ತಿಯಿಂದ ಪೋಷಕರ ಪಾದಗಳಿಗೆ ಹೂವಿನ ದಳಗಳನ್ನು ಅರ್ಪಿಸಿ, ಆರತಿ ಬೆಳಗಿ, ಅವರ ಆಶೀರ್ವಾದ ಪಡೆಯುವಂತೆ ಮಾರ್ಗದರ್ಶನ ನೀಡಿದರು. ಈ ಭಾವನಾತ್ಮಕ ಕ್ಷಣವು ಎಲ್ಲರ ಮನಸ್ಸನ್ನು ಸ್ಪರ್ಶಿಸಿತು.
ಗುರುಗಳ, ಪೋಷಕರ ಮತ್ತು ಜೀವನದಲ್ಲಿ ದಾರಿದೀಪವಾಗಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವ ಈ ವಿಶೇಷ ಕಾರ್ಯಕ್ರಮವು ಮಕ್ಕಳಲ್ಲಿ ಸಂಸ್ಕಾರ, ವಿನಯ ಮತ್ತು ಮೌಲ್ಯಗಳ ಅರಿವನ್ನು ಮೂಡಿಸಿತು.ಕೊನೆಯಲ್ಲಿ ವಂದನಾರ್ಪಣೆ ಹಾಗೂ ಶಾಂತಿಮಂತ್ರದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಸಮಾಪ್ತಿಗೊಂಡಿತು.

