ಧಾರವಾಡ : ಸಂತಾನಹೀನತೆ ಒಂದು ಸಾಮಾಜಿಕ ಕಳಂಕವಲ್ಲ. ಪ್ರಸ್ತುತ ವೈದ್ಯಕೀಯ ವಿಜ್ಞಾನದ ಆವಿಷ್ಕಾರದ ನೆಲೆಯಲ್ಲಿ ಬಂಜೆತನ ನಿವಾರಣೆಗೆ ಇನ್ ವಿಟ್ರೋ ಫರ್ಟಿಲೈಜೇಷನ್(ಐವ್ಹಿಎಫ್) ಹೊಸ ಭರವಸೆಯನ್ನು ಮೂಡಿಸುವ ಆಶಾಕಿರಣವಾಗಿದೆ ಎಂದು ಬೆಂಗಳೂರಿನ ರಾಜೀವ ಗಾಂಧಿ ವೈದ್ಯಕೀಯ ವಿಜ್ಞಾನ ವಿಶ್ವವಿದ್ಯಾಲಯದ ಜೈವಿಕ ತಂತ್ರಜ್ಞಾನ ಸ್ನಾತಕೋತ್ತರ ವಿಭಾಗದ ಮಾಜಿ ಸಂಯೋಜಕ ಡಾ.ಮಹಾದೇವಸ್ವಾಮಿ ಎಂ.ಪಿ. ಪ್ರತಿಪಾದಿಸಿದರು.

ಅವರು ನಗರದ ಜೀವಾ ಫರ್ಟಿಲಿಟಿ ಸೆಂಟರ್ನ 5ನೆಯ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಅಂತಾರಾಷ್ಟಿçಯ ಐವ್ಹಿಎಫ್ ದಿನಾಚರಣೆಯನ್ನು ಉದ್ಘಾಟಿಸಿ ಮಾತನಡುತ್ತಿದ್ದರು. ವೈದ್ಯಕೀಯ ವಿಜ್ಞಾನದ ಮೇರು ಸಾಧನೆಯನ್ನು ಗೌರವಿಸುವುದರ ಜೊತೆಗೆ ಬಂಜೆತನದ ಬಗ್ಗೆ ಜಾಗೃತಿ, ಸಹಾನುಭೂತಿ ಮತ್ತು ವೈಜ್ಞಾನಿಕ ಮನೋಭಾವವನ್ನು ಬೆಳೆಸುವುದೇ ಐವ್ಹಿಎಫ್ ದಿನಾಚರಣೆಯ ಉದ್ದೇಶವಾಗಿದೆ ಎಂದರು.
ಪ್ರಧಾನ ಆಶಯ ಭಾಷಣ ಮಾಡಿದ ಸಂತಾನೋತ್ಪತ್ತಿ ಮತ್ತು ಐವ್ಹಿಎಫ್ ತಜ್ಞೆ ಡಾ.ನಿಷ್ಠಾ ಮಹಾಬಲಶೆಟ್ಟಿ, ಮಹಿಳೆಯ ಅಂಡಾಣು ಮತ್ತು ಪುರುಷನ ವೀರ್ಯಾಣುವನ್ನು ಪ್ರಯೋಗಾಲಯದಲ್ಲಿ ಅತ್ಯಾಧುನಿಕ ವೈದ್ಯಕೀಯ ವಿಜ್ಞಾನದ ಉಪಕರಣಗಳ ಪ್ರಯೋಗಶೀಲತೆಯಲ್ಲಿ ಸಂಯೋಜಿಸಿ ರೂಪಿಸಿದ ಭ್ರೂಣವನ್ನು ನಂತರ ಮಹಿಳೆಯ ಗರ್ಭಾಶಯಕ್ಕೆ ವರ್ಗಾಯಿಸಿ ಮಕ್ಕಳನ್ನು ಪಡೆದುಕೊಳ್ಳುವ ಈ ವಿಶಿಷ್ಟ ವಿಧಾನವು ವೈದ್ಯಕೀಯ ವಿಜ್ಞಾನದ ವಿಸ್ಮಯವಾಗಿದೆ. ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆ ಅಥವಾ ಗುಣಮಟ್ಟ ಕಡಿಮೆ ಇದ್ದಾಗ ಮತ್ತು ಅಂಡನಾಳಗಳ ತೊಂದರೆ ನಿವಾರಣೆ ಮಾಡಿ ಗರ್ಭಧಾರಣೆಯ ಸಾಧ್ಯತೆಯನ್ನು ಹೆಚ್ಚಿಸುವ ಆಧುನಿಕ ವೈದ್ಯಕೀಯ ವಿಧಾನವಾಗಿ ಐವ್ಹಿಎಫ್ ಈಗ ಎಲ್ಲೆಡೆ ಗಮನಸೆಳೆದಿದೆ ಎಂದು ಹೇಳಿದರು.

ಸ್ತಿçರೋಗ ತಜ್ಞೆ ಡಾ.ನಿರ್ಮಲಾ ಮಹಾಬಲ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಕಿವಿ, ಮೂಗು ಮತ್ತು ಗಂಟಲು ಹಿರಿಯ ತಜ್ಞ ಡಾ. ಡಿ.ಎಂ.ಮಹಾಬಲ ಶೆಟ್ಟಿ, ಹಿರಿಯ ಹೃದಯ ಹಾಗೂ ಮಧುಮೇಹ ತಜ್ಞ ಡಾ.ಎಂ.ಡಿ.ಅಮೃತ ಸೇರಿದಂತೆ ವಿವಿಧ ತಜ್ಞ ವೈದ್ಯರು, ಐವ್ಹಿಎಫ್ ಮೂಲಕ ಮಕ್ಕಳನ್ನು ಪಡೆದ ಮತ್ತು ಮಕ್ಕಳನ್ನು ಪಡೆಯಲು ನೋಂದಾಯಿಸಿಕೊಂಡ ದಂಪತಿಗಳು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಮಲಪ್ರಭಾ ಉಪ್ಪಿನ ಸ್ವಾಗತಿಸಿದರು. ಶೀತಲ್ ಬೆಟಗೇರಿ ವಂದಿಸಿದರು

