ಮೈಸೂರು : ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ಕುರ್ ಕುರೆ ಪ್ಯಾಕೆಟ್ನಲ್ಲಿದ್ದ ಪ್ಲಾಸ್ಟಿಕ್ ಬಾಲ್ ಅನ್ನು ನುಂಗಿ 5 ವರ್ಷದ ಬಾಲಕನೋರ್ವ ಮೃತಪಟ್ಟಿದ್ದಾನೆ, ಗೌರಿಪುರ ಗ್ರಾಮದ ಸಂತೋಷ್ ಮತ್ತು ಐಶ್ವರ್ಯಾ ದಂಪತಿಯ ಏಕೈಕ ಪುತ್ರ ಮುಕುಂದ್ ಮಯೂರ್ ಈ ದುರಂತದಲ್ಲಿ ಮೃತಪಟ್ಟ ಬಾಲಕ.
ಶನಿವಾರ ಮಧ್ಯಾಹ್ನದ ಸಮಯದಲ್ಲಿ ಬಾಲಕ ತನ್ನ ಸಂಬಂಧಿಕರ ಮಕ್ಕಳೊಂದಿಗೆ ಆಟವಾಡುತ್ತಿದ್ದ. ಈ ವೇಳೆ ಅವನು ಅಳುತ್ತಿರುವುದನ್ನು ಕಂಡು, ಅವನ ಸಂಬಂಧಿಕರ ಮಕ್ಕಳು ಅವನಿಗೆ ಗೌರಿಪುರದ ಸ್ಥಳೀಯ ಅಂಗಡಿಯಲ್ಲಿ ಕುರ್ ಕುರೆ ಪ್ಯಾಕೆಟ್ ತಂದುಕೊಟ್ಟರು. ಕುರ್ ಕುರೆ ಪ್ಯಾಕೆಟ್ನಲ್ಲಿ ಮಕ್ಕಳ ಆಕರ್ಷಣೆಗಾಗಿ ಸಣ್ಣ ಪ್ಲಾಸ್ಟಿಕ್ ಬಾಲ್ ಇರುತ್ತದೆ. ಮುಕುಂದ್ ಅದನ್ನು ಗಮನಿಸದೆ ಕುರ್ ಕುರೆಯೊಂದಿಗೆ ಆ ಪ್ಲಾಸ್ಟಿಕ್ ಬಾಲ್ ಅನ್ನೂ ಸೇವಿಸಿದ್ದಾನೆ.
ಪ್ಲಾಸ್ಟಿಕ್ ಬಾಲ್ ಬಾಲಕನ ಗಂಟಲಿನಲ್ಲಿ ಸಿಲುಕಿಕೊಂಡು ಉಸಿರುಗಟ್ಟಿದೆ. ನಂತರ ಮಗು ತೀವ್ರವಾಗಿ ಒದ್ದಾಡಲು ಪ್ರಾರಂಭಿಸಿತು. ಅವನ ಒದ್ದಾಟವನ್ನು ಗಮನಿಸಿದ ಪೋಷಕರು ತಕ್ಷಣ ಅವನನ್ನು ಹುಣಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದರು. ಆದರೆ, ದುರದೃಷ್ಟವಶಾತ್, ಆಸ್ಪತ್ರೆ ತಲುಪುವ ಮೊದಲೇ ಮಾರ್ಗಮಧ್ಯದಲ್ಲಿ ಮಗುವು ಉಸಿರುಗಟ್ಟಿ ಪ್ರಾಣಬಿಟ್ಟಿದ್ದಾನೆ. ವೈದ್ಯರು ಪರೀಕ್ಷಿಸಿ, ಪ್ಲಾಸ್ಟಿಕ್ ಬಾಲ್ ಗಂಟಲಿನಲ್ಲಿ ಬಿಗಿಯಾಗಿ ಸಿಲುಕಿಕೊಂಡಿದ್ದರಿಂದ ಉಸಿರಾಟದಲ್ಲಿ ತೊಂದರೆಯಾಗಿದೆ. ಆದರೆ ತಕ್ಷಣದ ಚಿಕಿತ್ಸೆ ಸಿಗದೇ ಸಾವು ಸಂಭವಿಸಿದೆ ಎಂದು ತಿಳಿಸಿದ್ದಾರೆ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

