ಧಾರವಾಡ : ನಮ್ಮ ನೆಲದ ಬದುಕಿನ ಜೀವನಾನುಭವದ ಜ್ಞಾನ, ನಂಬಿಕೆಗಳು, ಕಲಾಪರಂಪರೆಯ ಜೊತೆಗೆ ಜನರ ಸಂಸ್ಕೃತಿ ಮೌಲ್ಯಗಳ ಅಭಿವ್ಯಕ್ತಿಯೇ ಜಾನಪದ ಎಂದು ಕರ್ನಾಟಕ ರಾಜ್ಯ ರೇಷ್ಮೆ ಮಾರಾಟ ಮಂಡಳಿಯ ಮಾಜಿ ಅಧ್ಯಕ್ಷೆ ಸವಿತಾ ಅಮರಶೆಟ್ಟಿ ಹೇಳಿದರು.
ಅವರು ತಾಲೂಕಿನ ಕೊಟಬಾಗಿ ಗ್ರಾಮದ ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆವರಣದಲ್ಲಿ ಧಾರವಾಡದ ಡಾ.ಎಸ್.ಎಸ್.ಜೀವಣ್ಣವರ ಎಜ್ಯೂಕೇಷನ್ ಟ್ರಸ್ಟ್ ಹಮ್ಮಿಕೊಂಡಿದ್ದ ಜಾನಪದ ಕಲಾ ಸಂಭ್ರಮ-2026 ಉದ್ಘಾಟಿಸಿ ಮಾತನಾಡುತ್ತಿದ್ದರು. ಜನರ ಬದುಕಿನಿಂದ ಹುಟ್ಟಿ ಬೆಳೆದ ಜಾನಪದ ಸಾಹಿತ್ಯವು ಜನರಿಂದ ಜನರಿಗಾಗಿ ತಲೆಮಾರಿನಿಂದ ತಲೆಮಾರಿಗೆ ಪ್ರವಹಿಸಿ ಇಂದಿಗೂ ಜೀವಂತವಾಗಿದೆ. ಭಾರತೀಯ ಸಂಸ್ಕೃತಿಯ ಅನೇಕ ಹಬ್ಬ ಹರಿದಿನಗಳ ಆಚರಣೆಗಳ ಪರಂಪರೆಯಲ್ಲಿಯೂ ಜಾನಪದವು ಇಂದಿಗೂ ಹಸಿರಾಗಿದೆ ಎಂದರು.

ಅತಿಹೆಚ್ಚು ಮೌಖಿಕ ನೆಲೆಯಲ್ಲಿಯೇ ಉಳಿದುಕೊಂಡಿದ್ದ ಜಾನಪದದ ವಿಭಿನ್ನ ಕಲಾಪ್ರಕಾರಗಳ ಸಾಹಿತ್ಯವನ್ನು ನಮ್ಮ ನಾಡಿನ ಅನೇಕ ಲೇಖಕರು ಬಹಳ ಶ್ರಮವಹಿಸಿ ಗ್ರಂಥಸ್ಥಗೊಳಿಸಿದ್ದು, ಇದು ನಮ್ಮ ಭಾವೀ ಪೀಳಿಗೆಯ ಜನರು ಸುಲಭವಾಗಿ ಅರಿಯುಲು ಅನುಕೂಲವಾದಂತಾಗಿದೆ. ಪ್ರಸ್ತುತ ಡಾ.ಜೀವಣ್ಣವರ ಟ್ರಸ್ಟ್ ಹಮ್ಮಿಕೊಂಡಿರುವ ಜಾನಪದ ಕಲಾ ಸಂಭ್ರಮವು ಈ ಪರಂಪರೆಯನ್ನು ಉಳಿಸುವಲ್ಲಿ ಸಹಾಯಕವಾಗಿದೆ ಎಂದೂ ಸವಿತಾ ಅಮರಶೆಟ್ಟಿ ನುಡಿದರು.
ಪಾಲಿ ಭಾಷಾ ವಿದ್ವಾಂಸ ಪಬ್ಬಜ್ಜೋರವಿತಿಪಾಲಿ ವಿಜ್ಜಾಮುನಿಯೋ ಮಾತನಾಡಿ, ಕ್ರಿಸ್ತಪೂರ್ವದಿಂದಲೂ ಭಾರತೀಯ ಸಂಸ್ಕೃತಿಯ ಶೀಲತತ್ವ ನೀತಿಯ ಮೌಲ್ಯಗಳನ್ನು ಮೂಲನೆಲೆಯಲ್ಲಿ ಉಳಿಸಿ ಬೆಳೆಸಿರುವುದು ಜಾನಪದವೇ ಆಗಿದೆ. ಇದು ಮಾನವನ ಅಂತರ0ಗ ಬಹಿರಂಗಗಳ ತೌಲನಿಕ ದರ್ಶನವಾಗಿಯೂ ಗಮನಸೆಳೆಯುತ್ತದೆ ಎಂದರು.
ಅಧ್ಯಕ್ಷತೆವಹಿಸಿದ್ದ ಲೇಖಕ ಗುರುಮೂರ್ತಿ ಯರಗಂಬಳಿಮಠ ಮಾತನಾಡಿ, ಜನರ ಬದುಕಿನ ವಿಭಿನ್ನ ವಿದ್ಯಮಾನಗಳ ಸಮಷ್ಟಿ ಪ್ರಜ್ಞೆಯನ್ನೇ ಕೇಂದ್ರೀಕರಿಸಿರುವ ಜಾನಪದವು ನಮ್ಮ ನೆಲದ ಮೂಲ ತತ್ವಗಳ ನೆಲೆಯಲ್ಲಿ ಹುಟ್ಟಿಕೊಂಡಿರುವ ವಿಭಿನ್ನ ಕಲಾಪ್ರಕಾರಗಳಲ್ಲಿ ಇಂದಿಗೂ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ ಎಂದರು.

ಕೊಟಬಾಗಿಯ ಗ್ರಾ.ಪಂ. ಮಾಜಿ ಅಧ್ಯಕ್ಷ ಮಹಾಂತಯ್ಯ ಹಿರೇಮಠ, ಪ್ರೌಢ ಶಾಲೆ ಎಸ್ಡಿಎಂಸಿ ಅಧ್ಯಕ್ಷ ದೇವೇಂದ್ರಪ್ಪ ಜಿನ್ನಪ್ಪನವರ, ಪ್ರಾಥಮಿಕ ಶಾಲೆ ಎಸ್ಡಿಎಂಸಿ ಅಧ್ಯಕ್ಷ ಮುತ್ತಯ್ಯ ಹಿರೇಮಠ, ಪಿಡಿಓ ಶಶಿರೇಖಾ ಚಕ್ರಸಾಲಿ, ಪ್ರೌಢ ಶಾಲೆ ಮುಖ್ಯಾಧ್ಯಾಪಕ ರಾಜಗುರು ತಳವಾರ, ಪ್ರಾಥಮಿಕ ಶಾಲೆ ಮುಖ್ಯಾಧ್ಯಾಪಕ ಮಹಾವೀರ ಅಣ್ಣಿಗೇರಿ, ಪಂಡಿತ ಬಸವರಾಜ ಮನಸೂರ ಟ್ರಸ್ಟ್ ಅಧ್ಯಕ್ಷ ಶಿವಾನಂದ ಅಮರಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಪ್ರಶಸ್ತಿ ಪ್ರದಾನ : ಇದೇ ಸಂದರ್ಭದಲ್ಲಿ ಪಬ್ಬಜ್ಜೋರವಿತಿಪಾಲಿವಿಜ್ಜಾಮುನಿಯೋ, ಸವಿತಾ ಅಮರಶೆಟ್ಟಿ, ಗುರುಮೂರ್ತಿ ಯರಗಂಬಳಿಮಠ, ಪ್ರಭಾಕರ ದೇಶಪಾಂಡೆ, ಶಿವಾನಂದ ಅಮರಶೆಟ್ಟಿ, ಶಶಿರೇಖಾ ಚಕ್ರಸಾಲಿ, ಶ್ರೀಶೈಲಗೌಡ ಕಮತರ, ಅಶ್ವಿನ ಭೂಸಾರೆ ಅವರಿಗೆ ‘ಶ್ರೀಜೀವಮಾನ ಸಾಧನಾಶ್ರೀ ಪ್ರಶಸ್ತಿ’ ನೀಡಿ ಗೌರವಿಸಲಾಯಿತು. ಕೊಟಬಾಗಿಯ ಉಡಚಮ್ಮದೇವಿ ಭಜನಾ ಸಂಘದ ಕಲಾವಿದರು, ಕಲಾವಿದರುಗಳಾದ ಸೈಯ್ಯದ್ ಜಮ್ಮಿಹಾಳ ಹಾಗೂ ಈರಣ್ಣ ದೇವರಗುಡ್ಡ, ಸರಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮಕ್ಕಳು ವಿವಿಧ ಜಾನಪದ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.
ಡಾ.ಎಸ್.ಎಸ್.ಜೀವಣ್ಣವರ ಎಜ್ಯೂಕೇಷನ್ ಟ್ರಸ್ಟ್ ಅಧ್ಯಕ್ಷ ಪ್ರವೀಣ ಜೀವಣ್ಣವರ ಸ್ವಾಗತಿಸಿದರು. ಶಿಕ್ಷಕ ಬಸನಗೌಡ ಗೌಡಣ್ಣವರ ವಂದಿಸಿದರು. ಕೊಟಬಾಗಿ ಗ್ರಾಮದ ವಿವಿಧ ಸಂಘ-ಸಂಸ್ಥೆಗಳ ಗಣ್ಯರು ಇದ್ದರು

