ಮಂಗಳೂರು : ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮೋಸ್ಟ್ ವಾಂಟೆಡ್ ಆರೋಪಿ ಉಮ್ಮರ್ ಫಾರೂಕ್ ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ ಅಧಿಕಾರಿಗಳು (NIA) ಕೇರಳದ ಕೊಚ್ಚಿಯಲ್ಲಿ ಬಂಧಿಸಿದ್ದಾರೆ.ಈ ಮೂಲಕ ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಎನ್ಐಎ ಬಂಧಿಸಿರುವ ಆರೋಪಿಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ.

ಕಳೆದ ಜುಲೈ 11ರಂದು ನೌಷಾದ್ ಮತ್ತು ನಸೀರ್ ಎಂಬ ಆರೋಪಿಗಳನ್ನು ಎನ್ಐಎ ಬಂಧಿಸಿತ್ತು. ಈ ವೇಳೆ ಕೊಚ್ಚಿಯಲ್ಲಿರುವ ಅಜ್ಞಾತ ಸ್ಥಳದ ಕುರಿತು ಅವರು ಮಾಹಿತಿ ನೀಡಿದ್ದರು ಎನ್ನಲಾಗಿದ್ದು, ಅದರ ಆಧಾರದ ಮೇಲೆ ಎನ್ಐಎ ಕಾರ್ಯಾಚರಣೆ ನಡೆಸಿ ಉಮ್ಮರ್ ಫಾರೂಕ್ನನ್ನು ಬಂಧಿಸಿದೆ. ಈ ಪ್ರಕರಣದಲ್ಲಿ ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರನ್ನು ಪತ್ತೆಹಚ್ಚಲು ಎನ್ಐಎ ಶೋಧ ಕಾರ್ಯ ಮುಂದುವರಿಸಿದೆ. ಉಮ್ಮರ್ ಫಾರೂಕ್ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಹಾಗೂ ಜಾಮೀನು ರಹಿತ ಬಂಧನ ವಾರಂಟ್ ಜಾರಿಯಾಗಿತ್ತು. ಆತನ ಬಂಧನಕ್ಕೆ 4 ಲಕ್ಷ ರೂ.ಬಹುಮಾನವನ್ನೂ ಘೋಷಿಸಲಾಗಿತ್ತು.
ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಬೆಳ್ಳಾರೆಯ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಾಗಿದ್ದ ಪ್ರವೀಣ್ ನೆಟ್ಟಾರು (32) ಅವರನ್ನು 2022ರ ಜುಲೈ 26ರಂದು ರಾತ್ರಿ ತಮ್ಮ ಅಂಗಡಿ ಮುಚ್ಚಿ ಮನೆಗೆ ತೆರಳುತ್ತಿದ್ದ ವೇಳೆ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಭೀಕರವಾಗಿ ಹತ್ಯೆ ಮಾಡಿದ್ದರು.

