ಮಂಗಳೂರು: ಈಶ ಗ್ರಾಮೋತ್ಸವ 2026ರ 18ನೇ ಆವೃತ್ತಿಯ ಕರ್ನಾಟಕ ವಿಭಾಗೀಯ ಪಂದ್ಯಾವಳಿಗಳು ಆ.9ರಂದು ಬೆಳಿಗ್ಗೆ 9.30ಕ್ಕೆ ಮೂಡುಬಿದಿರೆಯ ಸ್ವರಾಜ್ ಮೈದಾನ ಪಬ್ಲಿಕ್ ಗ್ರೌಂಡ್ನಲ್ಲಿ ಗಣ್ಯರ ಉಪಸ್ಥಿತಿಯಲ್ಲಿ ಆರಂಭಗೊಳ್ಳಲಿವೆ ಎಂದು ಈಶ ಫೌಂಡೇಶನ್ನ ಮಾಧ್ಯಮ ಸಂಯೋಜಕಿ ಲತಾ ತಿಳಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಶ ಔಟ್ರೀಚ್ ಆಯೋಜಿಸಿರುವ ಪಂದ್ಯಾವಳಿಯಲ್ಲಿ 18 ಪುರುಷರ ವಾಲಿಬಾಲ್ ಹಾಗೂ 12 ಮಹಿಳೆಯರ ಥ್ರೋಬಾಲ್ ತಂಡಗಳ 300ಕ್ಕೂ ಅಧಿಕ ಗ್ರಾಮೀಣ ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು ಹಾಗೂ ಕ್ರೀಡೆಯ ಮೂಲಕ ಸಮುದಾಯದ ಬಾಂಧವ್ಯ ಬಲಪಡಿಸುವುದು ಗ್ರಾಮೋತ್ಸವದ ಉದ್ದೇಶವಾಗಿದೆ ಎಂದರು.

ಉದ್ಘಾಟನಾ ಸಮಾರಂಭದಲ್ಲಿ ಜೈನ ಮಠದ ಪೀಠಾಧಿಪತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಡಾ. ಮೋಹನ್ ಆಳ್ವ, ಶಾಸಕ ಉಮಾನಾಥ ಕೋಟ್ಯಾನ್ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಈ ಬಾರಿ ಗ್ರಾಮೋತ್ಸವವು 10 ರಾಜ್ಯಗಳು ಹಾಗೂ ಪುದುಚೇರಿಯ 40 ಸಾವಿರಕ್ಕೂ ಅಧಿಕ ಗ್ರಾಮಗಳನ್ನು ತಲುಪುವ ಗುರಿ ಹೊಂದಿದ್ದು, ಸುಮಾರು 7 ಸಾವಿರ ತಂಡಗಳ 80 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದೆ. ಕರ್ನಾಟಕ ವಿಭಾಗೀಯ ಪಂದ್ಯಗಳು ರಾಷ್ಟ್ರೀಯ ಫೈನಲ್ಸ್ಗೆ ರಾಜ್ಯ ತಂಡಗಳ ಆಯ್ಕೆಗೆ ಅರ್ಹತಾ ಸುತ್ತಾಗಿವೆ. ವೃತ್ತಿಪರ ಆಟಗಾರರನ್ನು ಹೊರಗಿಟ್ಟು ಗ್ರಾಮೀಣ ಕ್ರೀಡಾಪಟುಗಳಿಗೆ ರಾಷ್ಟ್ರೀಯ ಮಟ್ಟದ ಸ್ಪರ್ಧೆಯ ಅನುಭವ ನೀಡುವುದು ಗ್ರಾಮೋತ್ಸವದ ವಿಶೇಷತೆಯಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖ ಸದಸ್ಯರಾದ ಹರ್ಷಾ, ಶ್ರೀಧರ್ ಹಾಗೂ ದೀಪಕ್ ಉಪಸ್ಥಿತರಿದ್ದರು.

